ಮಂಡ್ಯ: ಜಿಲ್ಲೆಯ ಜನರು ತಮ್ಮ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸ್ವಾಗತಿಸುವುದರ ಜತೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ಸಮ್ಮೇಳನದ ಅಂಗವಾಗಿ ನಗರ ಅಲಂಕಾರ ಸಮಿತಿ ವತಿಯಿಂದ ನಗರದ ಸ್ವರ್ಣಸಂದ್ರದಲ್ಲಿ ಆಯೋಜಿಸಿದ್ದ ಮನೆ ಮನೆಗಳಲ್ಲಿ ಕನ್ನಡ ಬಾವುಟ ಕಾರ್ಯಕ್ರಮಕ್ಕೆ ಬಾವುಟ ಹಾರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಕಟ್ಟುವ ಕಾರ್ಯಕ್ರಮ ಕೇವಲ ಮಂಡ್ಯ ನಗರಕ್ಕೆ ಸೀಮಿತವಾಗದೆ, ಜಿಲ್ಲೆಯ ಎಲ್ಲರ ಮನೆಮನೆಗಳ ಮೇಲೂ ಕನ್ನಡ ಬಾವುಟ ಹಾರಾಡಬೇಕು. ತಾಲೂಕು ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿಗಳ ಮೇಲೂ ಕನ್ನಡ ಬಾವುಟ ಹಾರಿಸಿ ಕನ್ನಡದ ಹಬ್ಬವನ್ನು ಮನೆಯ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಸಾಹಿತ್ಯ ಸಮ್ಮೇಳನದ ಅಂಗವಾಗಿ ಡಿ.15ರಂದು ‘ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದಡಿ ಹಮ್ಮಿಕೊಂಡಿರುವ ಮ್ಯಾರಥಾನ್‌ನಲ್ಲಿ ನಗರದ ಪ್ರತಿ ಮನೆಯಿಂದ ಕನಿಷ್ಟ ಒಬ್ಬ ಸದಸ್ಯರಾದರೂ ಪಾಲ್ಗೊಳ್ಳಬೇಕು ಎಂದರು.
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಮೂವತ್ತು ವರ್ಷದ ಬಳಿಕ ಮಂಡ್ಯದಲ್ಲಿ ನೆರವೇರುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿ ಪ್ರಜೆ ಭಾಗವಹಿಸಬೇಕು. ಇನ್ನೊಂದು ವಾರದಲ್ಲಿ ನಗರದ ಎಲ್ಲ ಮನೆಗಳ ಮೇಲೆ ಕನ್ನಡ ಬಾವುಟ ಹಾರಾಡಲಿದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿ, ಎಲ್ಲರ ಮನೆ ಮೇಲೆ ಕನ್ನಡ ಬಾವುಟ ಹಾರಿದಾಗ ಮನೆ ಮನದಲ್ಲಿ ಕನ್ನಡ ಕಂಪು ಮೂಡಲಿದೆ. ಬಾವುಟ ಹಾರಾಟ ನಮ್ಮ ಏಕತೆ, ಅಸ್ಮಿತೆಯ ಸಂಕೇತ. ಇದು ಕನ್ನಡದ ಹಿರಿಮೆ. ಕನ್ನಡದ ಅಭಿಮಾನದ ಕುರುಹು ಎಂದರು.
ಶಾಸಕ ರಮೇಶ ಬಂಡಿಸಿದ್ದೇಗೌಡರು, ಎಂಎಲ್‌ಸಿ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ನಗರಸಭೆ ಅಧ್ಯಕ್ಷ ಪ್ರಕಾಶ್, ಮುಡಾ ಅಧ್ಯಕ್ಷ ನಹೀಮ್, ಕಸಾಪ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.