ಜಿಲ್ಲೆ

ಕನ್ನಡ ಭಾಷೆಗೆ ಅಂತಾರಾಷ್ಟ್ರೀಯ ಮಾನ್ಯತೆ: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಹಾಭಾರತ ಕಾಲದಿಂದಲೂ ಕನ್ನಡ ಭಾಷೆಯ ಬಳಕೆಯ ಇತಿಹಾಸವಿದೆ. ಕನ್ನಡ, ಕರುನಾಡು ಹುಟ್ಟಿದೆ ಎಂಬ ಹೆಗ್ಗಳಿಕೆ ಇದೆ. ಅಲ್ಲಿಂದ ಹುಟ್ಟಿ, ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೀಗ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆಯ ಜತೆಗೆ ತನ್ನದೇ ಆದ ವಿಶಿಷ್ಟ ಹೆಸರಿದೆ ಎಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಬಣ್ಣಿಸಿದರು.

ನಗರದ ಗಾಂಧಿಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನ್ನಡ ಹಬ್ಬ, ಕವಿಗೋಷ್ಠಿ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದ ಇತಿಹಾಸವೇ ಕನ್ನಡವಾಗಿದೆ. ಭಾವನೆ, ಸಂಸ್ಕೃತಿ, ಇತಿಹಾಸದ ಮಿಶ್ರಣವೇ ಕನ್ನಡ. ಕರ್ನಾಟಕದಲ್ಲಿ 165ಕ್ಕೂ ಅಧಿಕ ಭಾಷೆಗಳನ್ನು ಜನ ಬಳಸುತ್ತಾರೆ. ಅದೇ ರೀತಿ ಮಂಡ್ಯದಂತಹ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಅತಿ ಹೆಚ್ಚು ಬಳಕೆ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಐದು ಕೋಟಿ ಅರವತ್ತೂ ಲಕ್ಷಕ್ಕೂ ಹೆಚ್ಚು ಜನರು ವಿಶ್ವಾದ್ಯಂತ ಕನ್ನಡ ಮಾತನಾಡುತ್ತಾರೆ. ನೂರಕ್ಕೂ ಹೆಚ್ಚು ದೇಶದಲ್ಲಿ ಕನ್ನಡ ಮಾತನಾಡುವ ಕನ್ನಡಿಗರಿದ್ದಾರೆ. ಕನ್ನಡ ಮತ್ತಷ್ಟು ಬೆಳೆಯಬೇಕೆಂದರೆ ಮಾತನಾಡುವವರ ಸಂಖ್ಯೆ ಹೆಚ್ಚಾಗಬೇಕೆಂದರು. ಒಂದು ಭಾಷಾ ಅಧ್ಯಯನ ಸಂಶೋಧನೆಯ ಪ್ರಕಾರ ವಿಶ್ವದಲ್ಲಿ ಸುಮಾರು 7,151 ಭಾಷೆಗಳಿವೆ. 2001 ಜನಗಣತಿಯ ಪ್ರಕಾರ ಭಾರತದಲ್ಲಿ 1,721 ವೈವಿಧ್ಯಮಯ ಭಾಷೆ ನಮ್ಮ ದೇಶದಲ್ಲಿದೆ. ಜನಗಣತಿ ಮಾಡಿದರೆ ಮತ್ತಷ್ಟು ಭಾಷೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟು ಭಾಷೆಗಳ ನಡುವೆ ನಮ್ಮ ಕನ್ನಡ ವಿಶೇಷ ಸ್ಥಾನ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳು ನಡೆದು ಹೊಸ ಹೊಸ ಪದಗಳು ಉಗಮವಾಗುತ್ತಿವೆ. ಆ ಪದಗಳಿಗೆ ಸರಿಸಮಾನವಾದ ಪದಗಳನ್ನೂ ಸಾಹಿತಿಗಳು, ಭಾಷಾತಜ್ಞರು, ಪತ್ರಕರ್ತರು ಟಂಕಿಸುತ್ತಿದ್ದಾರೆ. ಆ ಪದಗಳನ್ನೂ ನಾವೂ ದಿನನಿತ್ಯ ಬಳಸುವ ಮೂಲಕ ಕನ್ನಡ ಭಾಷೆಯನ್ನೂ ಉಳಿಸಿ ಬೆಳೆಸುವ ಜವಾಬ್ದಾರಿ ಹೆಚ್ಚಿದೆ ಎಂದು ಉದಾಹರಣೆ ಮೂಲಕ ವಿವರಿಸಿದರು.

ಊಟಿ, ಕಾಸರಗೋಡು, ಸೊಲ್ಲಾಪುರ ಪ್ರದೇಶಗಳು ಬೇರೆ ರಾಜ್ಯದಲ್ಲಿದ್ದರೂ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಈ ಪ್ರದೇಶಗಳು ಮೂಲ ಕರ್ನಾಟಕಕ್ಕೆ ಸೇರಿದ್ದರಾದರೂ ಹಿಂದೆ ನಮ್ಮನ್ನಾಳಿದ ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶಗಳು ಇಂದು ಬೇರೆ ರಾಜ್ಯಗಳ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಮಂಡ್ಯ ಜಿಲ್ಲೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಬಹಳಷ್ಟಿದೆ. ಅವರನ್ನು ಸದಾ ಸ್ಮರಿಸುವ ಕೆಲಸವಾಗಬೇಕು. ಮಂಡ್ಯ ನಗರದ ಪ್ರಮುಖ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಬೇಕು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಕನ್ನಡ ಹೆಚ್ಚು ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯ ಉಳಿಸಿ, ಬೆಳೆಸುವಂತಹ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕು. ಮುಂದಿನ ತಿಂಗಳು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಮಂಡ್ಯ ಸಮ್ಮೇಳನ ರಾಜ್ಯದಲ್ಲಿ ಇತಿಹಾಸವಾಗಬೇಕು. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಜಯರಾಂ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಯುವಕರ ಮೇಲಿದೆ. ಇಂದಿನ ಯುವ ಪೀಳಿಗೆ ಆಂಗ್ಲ ಭಾಷೆಗೆ ಜೋತು ಬಿದ್ದಿದ್ದಾರೆ. ಆಂಗ್ಲ ಭಾಷೆಯನ್ನು ಕಲಿಕೆಗೆ ಮೀಸಲಿಟ್ಟು, ಕನ್ನಡವನ್ನು ಹೆಚ್ಚು ಬೆಳೆಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಸಮಾಜ ಸೇವಕರಾದ ಗಂಗಾಧರ್, ಎಲ್.ಸಿ.ಮಂಜುನಾಥ್, ವೆಂಕಟೇಶ್, ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಉಪಾಧ್ಯಕ್ಷ ಅರಸಯ್ಯ, ಕಾರ್ಯಾಧ್ಯಕ್ಷ ನಾಗೇಶ್ ರಾಗಿಮುದ್ದನಹಳ್ಳಿ, ಪ್ರಧಾನ ಕಾರ್ಯದರ್ಶಿ ಮಂಗಲ ಶಿವಣ್ಣ, ಉದ್ಯಮಿ ಸಿದ್ದೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಹೊಸಹಳ್ಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಲವರಿಗೆ ಸುವರ್ಣ ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ ಹಾಗೂ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.