ಜಿಲ್ಲೆ

ಕನ್ನಡಿಗರಿಗೆ ಖಾಸಗಿಯಲ್ಲಿ ಉದ್ಯೋಗಾವಕಾಶಕ್ಕೆ ಒತ್ತಾಯ

ಪಂಕಜ ಕೆ.ಎಂ.

ಬೆಂಗಳೂರು: ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಡಾ. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಎನ್ನುವುದು ಸಹಜ ವಿಚಾರ. ಇಂದು ಇದು ವಿಶ್ವದಾದ್ಯಂತ ಕೇಳಿಬರುತ್ತಿರುವ ಕೂಗು. ಕರ್ನಾಟಕದಲ್ಲಿ ಸಾಕಷ್ಟು ಕೇಂದ್ರೋದ್ಯಮಗಳು, ಸಾರ್ವಜನಿಕ ಹಾಗೂ ಖಾಸಗಿ ಉದ್ಯಮಗಳಿದ್ದರೂ ಕನ್ನಡಿಗರಿಗೆ ಸೂಕ್ತ ಪ್ರಮಾಣದಲ್ಲಿ ಅವಕಾಶ ದೊರೆಯುತ್ತಿಲ್ಲ. ಇದು ಸ್ವಾತಂತ್ರ್ಯಪೂರ್ವದಿಂದದಲೂ ಇರುವ ಸ್ಥಿತಿ ಎಂದು ಪತ್ರಮುಖೇನ ಬೇಸರ ವ್ಯಕ್ತಪಡಿಸಿದ್ದಾರೆ.

1981ರಿಂದಲೂ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಸೂಕ್ತ ಅವಕಾಶ ದೊರಕಿಸಿಕೊಡಲು ಪ್ರಯತ್ನ ನಡೆಸಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಯ ಸ್ವರೂಪವನ್ನು ಅಧ್ಯಯನ ಮಾಡಿ, ಕಾರ್ಯಸಾಧುವಾದ ಪರಿಹಾರ ಮಾರ್ಗಗಳನ್ನು ಸೂಚಿಸಿ ವರದಿ ಸಲ್ಲಿಸಲು ಅಂದಿನ ಸರ್ಕಾರ ಡಾ. ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚಿಸಿತು. ಸಮಿತಿಯು ಹಲವು ಉದ್ಯಮ, ಸಂಸ್ಥೆಗಳಿಗೆ, ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಬೇರೆ ರಾಜ್ಯಗಳಿಂದ ಅಗತ್ಯ ಮಾಹಿತಿ ತರಿಸಿಕೊಂಡು ಎಲ್ಲವನ್ನು ಗಮನಿಸಿ ವರದಿ ಸಲ್ಲಿಸಿತು. ಈ ವರದಿಯನ್ನು ಗಮನಿಸಿದ ಕೆಲವು ರಾಜ್ಯಗಳು ಇದೇ ಮಾದರಿಯಲ್ಲಿ ಕಾನೂನು ರಚಿಸಿವೆ ಎಂದು ವಿವರಿಸಿದ್ದಾರೆ.

ಕನ್ನಡಿಗರಿಗೆ ಉದ್ಯೋಗಾವಕಾಶ ಮೀಸಲು ನೀಡುವ ಮಸೂದೆಯನ್ನು ಮತ್ತೊಮ್ಮೆ ಪರಮಾರ್ಶಿಸಿ ಹಾಗೂ ಡಾ. ಸರೋಜಿನಿ ಮಹಿಷಿ ವರದಿಯಲ್ಲಿರುವ ಅಂಶಗಳನ್ನು ಗಮನಿಸಿ ಖಾಸಗಿ ವಲಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಲಭಿಸುವಂತೆ ಮಾಡಲು ಸರ್ಕಾರ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಸ್ಥಳೀಯರು ಯಾರು? ಡಾ. ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗ ಎಂಬುದಕ್ಕೆ ತಾತ್ವಿಕ ನೆಲೆಯನ್ನು ಒದಗಿಸಿತು. ಹಾಗೇ ಸ್ಥಳೀಯರು ಎಂದರೆ ಯಾರು ಎಂಬುದಕ್ಕೆ ಖಚಿತ ಮಾಪನವನ್ನು ಅಳವಡಿಸಿ ರಾಷ್ಟ್ರದ ಗಮನ ಸೆಳೆಯಿತು. ವರದಿಯಂತೆ ಸ್ಥಳೀಯರು (ಕನಿಷ್ಠ 15 ವರ್ಷಗಳಿಂದಲೂ ನಿವಾಸಿ) ಮಾನದಂಡವನ್ನು ಹಲವು ರಾಜ್ಯಗಳು ಅಳವಡಿಸಿಕೊಂಡಿವೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.