ಮೈಸೂರು: ಗಜಲ್ಗೆ ಹಲವು ವರ್ಷಗಳ ಇತಿಹಾಸವಿದೆ. ಆದರೆ ಕನ್ನಡದ ವಿಮರ್ಶಕರು ಗಜಲ್ ಕಡೆಗೆ ಗಮನ ನೀಡುತ್ತಿಲ್ಲ ಎಂದು ಕಲಬುರಗಿ ಎನ್.ವಿ. ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಗಜಲ್ ಗಾಯಕ ಡಾ. ಮಲ್ಲಿನಾಥ ಎಸ್. ತಳವಾರ ತಿಳಿಸಿದರು.
ಸೌಗಂಧಿಕಾ ಪ್ರಕಾಶನದಿಂದ ನಗರದ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೌಗಂಧಿಕಾ ವಿ. ಜೋಯಿಸ್ ಅವರ ಸುಗಂಧ ಲಹರಿ ಗಜಲ್ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜ, ಮಹಾರಾಜರ ಕಾಲದಲ್ಲಿ ಗಜಲ್ ಜೀವನದ ಪಾಠ, ಸಾರವನ್ನು ತಿಳಿಸಿಕೊಡುತ್ತಿದ್ದು, ಇದಕ್ಕೆ ನನ್ನದೇ ಅದ ಇತಿಹಾಸವಿದೆ. ಆದರೆ ಇದಕ್ಕೆ ಕನ್ನಡದಲ್ಲಿ ವಿಮರ್ಶಕರು ಸೂಕ್ತ ಮನ್ನಣೆ ನೀಡದೆ ಕಡೆಗಣಿಸಿದ್ದಾರೆ. ಆದ್ದರಿಂದ ಗಜಲ್ ಕಾರರು ವಿಮರ್ಶಕರ ದೃಷ್ಟಿಯನ್ನು ಸೆಳೆಯುವ ಮೂಲಕ ಗಜಲ್ ಪರಂಪರೆಯನ್ನು ಕನ್ನಡದಲ್ಲಿಯೂ ಬೆಳೆಯುವಂತೆ ಮಾಡಬೇಕಿದೆ ಎಂದು ಅವರು ಹೇಳಿದರು.
ಲೇಖಕಿ ಎ. ಹೇಮಗಂಗಾ ಮಾತನಾಡಿ, ಸಾಹಿತ್ಯದಲ್ಲಿ ಆಸಕ್ತಿ ಇರುವವರು ಸಂಸ್ಕೃತವನ್ನು ತಿಳಿದುಕೊಂಡರೆ ಒಳಿತು. ಸಂಸ್ಕೃತ ಭಾಷೆ ಗೊತ್ತಿರುವವರಿಗೆ ಪದಗಳ ಸಂಪತ್ತು ಹೆಚ್ಚಿರುತ್ತದೆ. ಯಾವ ಕಾವ್ಯ, ಕೃತಿಯು ಓದುಗರರಿಗೆ ಸಲೀಸಲಾಗಿ ಅರ್ಥವಾಗುವಂತೆ ಬರೆಯುತ್ತಾರೋ ಅವರೇ ನಿಜವಾದ ಕವಿ, ಸಾಹಿತಿ ಎಂದು ಬಣ್ಣಿಸಿದರು.
ವಿವಿಧ ಕ್ಷೇತ್ರದ ಎಂ.ಬಿ. ಸಂತೋಷ್, ಎಸ್. ಪುಟ್ಟಪ್ಪ ಮುಡಿಗುಂಡ, ಜೆ. ಪ್ರಭಾಶಾಸ್ತ್ರಿ ಜೋಶ್ಯುಲ, ಎ. ಹೇಮಗಂಗಾ, ಎನ್.ಆರ್. ರೂಪಶ್ರೀ ಅವರಿಗೆ ಸಾಹಿತ್ಯ ಸುಗಂಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್ ಕಾರ್ಯಕ್ರಮ ಉದ್ಘಾಟಿಸಿದರು. ಲೇಖಕ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸೌಗಂಧಿಕಾ ಎ. ಜೋಯಿಸ್, ಶಶಿಕಲಾ ಚಂದ್ರಶೇಖರ್, ಶಿ.ರ. ನಂದಿನಿ ಇತರರು ಇದ್ದರು.