ಜಿಲ್ಲೆ

ಕೆಐಎನಲ್ಲಿ ಕನ್ನಡ ಪುಸ್ತಕದ ಮಳಿಗೆ ಅಗತ್ಯ: ನಟ "ನೆನಪಿರಲಿ' ಪ್ರೇಮ್​ ಆಗ್ರಹ

ಹರೀಶ್​​ ಕೆ.ಸಿ.

ಹರಿದ್ವಾರ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪುಸ್ತಕದ ಮಳಿಗೆ ತೆರೆಯುವ ಕೆಲಸವಾಗಬೇಕು. ಪ್ರತಿಯೊಬ್ಬರೂ ಕನ್ನಡವನ್ನು ಪಸರಿಸುವ ಕಾರ್ಯ ಮಾಡಬೇಕು. ಯಾವುದೇ ಸಂದಿಗ್ಧ ಪರಿಸ್ಥಿತಿ ಎದುರಾದರೂ ನೆಲದ ಭಾಷೆಯನ್ನು ಬಿಟ್ಟುಕೊಡಬಾರದು ಎಂದು ನಟ "ನೆನಪಿರಲಿ' ಪ್ರೇಮ್​ ಹೇಳಿದ್ದಾರೆ.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ, ಉತ್ತರಖಂಡದ ಹರಿದ್ವಾರ ಮತ್ತು ಹೃಷಿಕೇಶದ ಗಂಗಾ ತೀರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಮತ್ತು ಚಲನಚಿತ್ರ ರಂಗ ಉಳಿಯಬೇಕು. ಕನ್ನಡ ಪುಸ್ತಕ ಖರೀದಿಸುವವರ ಸಂಖ್ಯೆ ಹೆಚ್ಚಾಗಬೇಕು. ಮದುವೆ, ಗೃಹಪ್ರವೇಶದಲ್ಲಿ ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡುವಂತಾಗಬೇಕೆಂದು ಎಂದರು.

ಮಾಜಿ ಮೇಯರ್​ ಗೌತಮ್​ ಕುಮಾರ್​ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಸರಳ ಮತ್ತು ಸುಂದರ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಂಗಳೂರು ನಗರ ಅಭಿವೃದ್ದಿಗೆ ಮತ್ತು ಕನ್ನಡಿಗರ ಸೇವೆ ಮಾಡಲು ಬಿಬಿಎಂಪಿಯಲ್ಲಿ ಮೇಯರ್​ ಆಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯದ ಫಲ ಎಂದರು. ಗಾಯಕಿ ಎಂ.ಡಿ. ಪಲ್ಲವಿ ತಂಡ ಪ್ರಸ್ತುತಪಡಿಸಿದ ಸಂಗೀತ ಕಾರ್ಯಕ್ರಮ ಸಭಿಕರಿಗೆ ಮನರಂಜನೆ ಒದಗಿಸಿತು. ಕಾರ್ಯಕ್ರಮದಲ್ಲಿ ಹಲವು ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಸಂದ ಅಧ್ಯಕ್ಷ ಎ. ಅಮೃತ್​ರಾಜ್​. ಪಲಿಮಾರು ಮಠ ಪ್ರಬಂಧಕ ಪ್ರಭಾಕರ್​ ಮಂಜುನಾಥ್​, ಮಹದೇವಪುರ ವಲಯ ಜಂಟಿ ಆಯುಕ್ತೆ ಡಾ.ದ್ರಾಕ್ಷಿಯಿಣಿ, ವಕೀಲ ವಿ. ಶ್ರೀನಿವಾಸ್​ ಮತ್ತಿತರರಿದ್ದರು.

ಕನ್ನಡ ಶ್ರೀಮಂತ ಭಾಷೆಯಾಗಿದೆ. ಎಂಟು ಜ್ಷಾನಪೀಠ ಪ್ರಶಸ್ತಿ ಬಂದಿರುವುದರಿಂದ ಕನ್ನಡದ ಶಕ್ತಿ ಏನು ಎಂಬುದು ತಿಳಿಯುತ್ತದೆ. ಸರಳ, ಸುಂದರ ಭಾಷೆ ಇದಾಗಿದೆ. ಸಾಹಿತ್ಯ, ಸಂಗೀತದ ಆಸಕ್ತಿ ಬೆಳೆಸಿಕೊಂಡರೆ ಮತ್ತಷ್ಟು ಸದೃಢವಾಗಬಹುದು.

| ಆರ್​.ಎಲ್​. ದೀಪಕ್​. ಆದಾಯ ತೆರಿಗೆ ಇಲಾಖೆ ಆಯುಕ್ತ.