-ಸಂದೀಪ್ ಸಾಲ್ಯಾನ್ ಬಂಟ್ವಾಳ
ತಾಲೂಕಿನ ಕನ್ನಡ ಸಾಹಿತ್ಯಾಸಕ್ತರ ಸ್ವಾಭಿಮಾನದ ಹೆಗ್ಗುರುತು ಕನ್ನಡ ಭವನದ ಮೇಲೆ ಕರೊನಾ ಕರಿಛಾಯೆ ಬಿದ್ದಿದೆ. ಹಲವು ವರ್ಷಗಳ ಹಿಂದೆಯೇ ಶಿಲಾನ್ಯಾಸಗೊಂಡು ಈಗ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದರೂ ಅನುದಾನ ಕೊರತೆಯಿಂದಾಗಿ ಕಟ್ಟಡದ ಕೆಲಸ ಪೂರ್ಣಗೊಂಡಿಲ್ಲ. ಈ ಬಾರಿಯ ಕನ್ನಡ ರಾಜ್ಯೋತ್ಸವ ವೇಳೆಗಾದರೂ ಕನ್ನಡ ಭವನ ಉದ್ಘಾಟನೆಗೊಳ್ಳಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಹಣವಿಲ್ಲದೆ ಕಟ್ಟಡ ನಿರ್ಮಾಣದ ಕೆಲಸ ಸದ್ಯಕ್ಕೆ ಸ್ಥಗಿತಗೊಂಡಿದೆ.
ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತ ಕಟ್ಟಡಬೇಕು ಎನ್ನುವ ಉದ್ದೇಶದಿಂದ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬಿ.ಸಿ.ರೋಡಿನ ಕೈಕುಂಜೆ ಬಳಿ ಕನ್ನಡ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಅನುದಾನ ಕೊರತೆ ನಡುವೆಯೂ ಈಗಾಗಲೇ 60 ಲಕ್ಷ ರೂ. ಕೆಲಸ ಆಗಿದೆ. ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತೆ ಹಣದ ಸಮಸ್ಯೆ ಎದುರಾಗಿದೆ.
8 ಸೆಂಟ್ಸ್ ಜಾಗದಲ್ಲಿ ಕನ್ನಡ ಭವನ ನಿರ್ಮಾಣಗೊಳ್ಳುತ್ತಿದ್ದು, ತಲಾ 2 ಸಾವಿರ ಚದರ ಅಡಿ ವಿಸ್ತೀರ್ಣದಂತೆ ಒಟ್ಟು 4 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ಭವನ ನಿರ್ಮಾಣವಾಗುತ್ತಿದೆ. ಮೇಲಿನ ಅಂತಸ್ತಿನಲ್ಲಿ 250 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಂಗಣ, ವೇದಿಕೆ, ಗ್ರೀನ್ ರೂಮ್, ಶೌಚಗೃಹ ನಿರ್ಮಿಸಲಾಗಿದೆ. ತಳ ಅಂತಸ್ತಿನಲ್ಲಿ ಕಟ್ಟಡ ನಿರ್ವಹಣೆಯ ವೆಚ್ಚವನ್ನು ಭರಿಸಲು 2 ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿದೆ.
ಹೆಚ್ಚಿನ ಅನುದಾನಕ್ಕೆ ಮನವಿ: ಕಸಾಪ ತಾಲೂಕು ಸಮಿತಿಯ ನಿಯೋಗ ಈಗಾಗಲೇ ಸರ್ಕಾರದ ಅನುದಾನಕ್ಕಾಗಿ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ಮಾಡಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ಬಂಟ್ವಾಳ ತಾಲೂಕಿನ ವ್ಯಾಪ್ತಿಯನ್ನು ಒಳಗೊಂಡಿರುವುದರಿಂದ ಅಲ್ಲಿನ ಶಾಸಕ ಯು.ಟಿ.ಖಾದರ್ ಅವರಿಗೂ ಮನವಿ ನೀಡಲಾಗಿದೆ. 10 ಲಕ್ಷ ರೂ.ಗಳನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ನೀಡಿದ್ದು, ಈ ಹಿಂದೆ ಸಚಿವರಾಗಿದ್ದ ಬಿ.ರಮಾನಾಥ ರೈಯವರು ತಮ್ಮ ಅನುದಾನವಾಗಿ 5 ಲಕ್ಷ ರೂ. ನೀಡಿದ್ದಾರೆ. ಜತೆಗೆ ಅನೇಕ ಮಂದಿ ದಾನಿಗಳು ಆರ್ಥಿಕ ಸಹಕಾರ ನೀಡಿದ್ದಾರೆ.
ಸರ್ಕಾರದ ಅನುದಾನದ ಜತೆಗೆ ಇತರ ಕಂಪನಿಗಳ ಅನುದಾನಕ್ಕೆ ಸಂಸದರ ಮೂಲಕ ಮನವಿ ಮಾಡಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಚಿಕ್ಕಾಸು ಹಣ ಬಂದಿಲ್ಲ. ಉಳಿದ ಕಾಮಗಾರಿ ಹಾಗೂ ಪೀಠೋಪಕರಣಗಳಿಗಾಗಿ ಅಂದಾಜು 25 ಲಕ್ಷ ರೂ. ಬೇಕಾಗಲಿದೆ.
ಇಪ್ಪತ್ತು ವರ್ಷಗಳ ಹಿಂದೆ ಶಿಲಾನ್ಯಾಸ: ಬಿ.ಸಿ.ರೋಡಿನ ಕೈಕುಂಜದಲ್ಲಿರುವ ಎಪಿಎಂಸಿ ಕಟ್ಟಡದ ಬಳಿ 2000 ಇಸವಿಯಲ್ಲಿಯೇ ಕನ್ನಡ ಭವನಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನೆಪಿಗಾಗಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಶಿಲಾನ್ಯಾಸ ನೆರವೇರಿಸಿದ್ದರು.
ಕನ್ನಡ ಭವನ ಕಾಮಗಾರಿ ಪೂರ್ತಿಗೊಳಿಸಲು ಹಣದ ಸಮಸ್ಯೆ ಎದುರಾಗಿದೆ. ಮೂರು ವರ್ಷಗಳ ಕುಂಭದ್ರೋಣ ಮಳೆ ಹಾಗೂ ಕರೊನಾ ತೀವ್ರ ಹೊಡೆತ ನೀಡಿದೆ. ಆರ್ಥಿಕ ಕ್ರೋಡೀಕರಣಕ್ಕಾಗಿ ತಂಡಗಳನ್ನು ಮಾಡಿಕೊಂಡು ಗ್ರಾಮ ಗ್ರಾಮಗಳಲ್ಲಿ ತಿರುಗಾಡಿದ್ದೇವೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕನಿಷ್ಠ 25 ಲಕ್ಷ ರೂ. ಬೇಕಾಗಿದೆ.
-ಕೊಳಕೆ ಗಂಗಾಧರ ಭಟ್, ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ
ಕಟ್ಟಡದ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು, ಪೀಠೋಪಕರಣ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಅನುದಾನ ಬೇಕಾಗಿದೆ. ಘೋಷಣೆಯಾಗಿರುವಂತೆ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂ. ಅನುದಾನ ಬಂದರೆ ಕೆಲಸ ಪುನರಾರಂಭಿಸಬಹುದು
-ಬಿ.ಮೋಹನ್ ರಾವ್, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ