ಜಿಲ್ಲೆ

ಕನ್ನಡ ಕಟ್ಟುವ ಕಟ್ಟಾಳ ಸಂಘಟಿಸುವ ಉದ್ದೇಶ: ಡಾ.ವಾಮನ್ ರಾವ್ ಬೇಕಲ್ ಅಭಿಮತ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕನ್ನಡದ ಕಟ್ಟಾಳುಗಳನ್ನು ಪರಸ್ಪರ ಜೋಡಿಸುವುದೇ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನದ ಪ್ರಧಾನ ಉದ್ದೇಶ ಎಂದು ಕನ್ನಡ ಭವನ ಮತ್ತು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕ ಡಾ.ವಾಮನ್ ಬೇಕಲ್ ತಿಳಿಸಿದ್ದಾರೆ.

ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಶ್ರಯದಲ್ಲಿ ಸಾಹಿತಿ ಕೊಳಚಪ್ಪೆ ಡಾ.ಗೋವಿಂದ ಭಟ್ ಮಂಗಳೂರಿನ ನಿವಾಸದಲ್ಲಿ ನಡೆದ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ದ ದ್ವಿತೀಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ಪ್ರಕಾಶಕ ಕಲ್ಲಚ್ಚು ಮಹೇಶ್ ಆರ್ ನಾಯಕ್ ಅಧ್ಯಕ್ಷತೆ ವಹಿಸಿದರು. ಸಾಹಿತಿ ಡಾ.ವಸಂತ್ ಕುಮಾರ್ ಪೆರ್ಲ, ಕಥಾಬಿಂದು ಪ್ರಕಾಶನದ ರೂವಾರಿ ಪಿ.ವಿ. ಪ್ರದೀಪ್ ಕುಮಾರ್, ಸಾಹಿತಿ ಜಯಾನಂದ ಪೆರಾಜೆ, ಸಾಹಿತಿ ವೈದ್ಯ ಡಾ.ಸುರೇಶ್ ನೆಗಳಗುಳಿ ಭಾಗವಹಿಸಿದ್ದರು.

ಕಾರ್ಯಕ್ರಮ ಸಂಯೋಜಕ ಡಾ.ಕೊಲಚಪ್ಪೆ ಗೋವಿಂದ ಭಟ್ ಸ್ವಾಗತಿಸಿದರು. ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಅಪೂರ್ವ ಕಾರಂತ್ ಪುತ್ತೂರು ಮತ್ತು ಕಸ್ತೂರಿ ಜಯರಾಮ್ ನಿರೂಪಿಸಿದರು. ಹಿರಿಯ ಸಾಹಿತಿ ಬಿ.ಸತ್ಯವತಿ ಭಟ್ ಕೊಳಚಪ್ಪು ವಂದಿಸಿದರು.

ಸಾಧಕರಿಗೆ ಸನ್ಮಾನ

ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬಿ.ಕೆ.ಮಾಧವ ರಾವ್, ‘ಸೊಗಸು’ ಪುಸ್ತಕ ಬಹುಮಾನಕ್ಕೆ ಭಾಜನರಾದ ಪಿ.ವಿ.ಪ್ರದೀಪ್ ಕುಮಾರ್ ಹಾಗೂ ಇತ್ತೀಚೆಗೆ ಆಕಾಶವಾಣಿ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಪಿ.ಸೂರ್ಯನಾರಾಯಣ್ ಭಟ್ ಅವರಿಗೆ ಪರಿಷತ್ತಿನ ‘ದಕ್ಷಿಣ ಕನ್ನಡ ಜಿಲ್ಲಾ ಸಾಧಕ ಶ್ರೀ ಪ್ರಶಸ್ತಿ 2025’ ನೀಡಿ ಗೌರವಿಸಲಾಯಿತು. ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ.ಸುರೇಶ್ ನೆಗಳಗುಳಿ ವಹಿಸಿದ್ದರು. ಗಾಯಕಿ ಪ್ರತಿಭಾ ಸಾಲ್ಯಾನ್, ಅನಿತಾ ಶೆಣೈ, ಗ್ರೇಗೋರಿ ತಂಡ ಗಾಯನ ಮನರಂಜನಾ ಕಾರ್ಯಕ್ರಮ ನಡೆಸಿದರು.