ಜಿಲ್ಲೆ

ಜಾತ್ಯಾತೀತತೆಯ ಸಂಕೇತವಾದ ನಾಡ ಹಬ್ಬ, ಧಾರ್ಮಿಕವಲ್ಲ- ಡಾ. ಪುರುಷೋತ್ತಮ ಬಿಳಿಮಲೆ

ಪಂಕಜ ಕೆ.ಎಂ.

ಬೆಂಗಳೂರು: ಕನ್ನಡದ ಜಾತ್ಯಾತೀತತೆಯ ಸಂಕೇತವಾಗಿರುವ ನಾಡಹಬ್ಬ ದಸರಾ ಸಂಪೂರ್ಣ ಧಾರ್ಮಿಕ ಹಬ್ಬವೆಂದು ಬಿಂಬಿಸಿ ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಿರುವ ಹಿತಾಸಕ್ತಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಘನತೆ ಕುಸಿಯಲು ಕಾರಣರಾಗಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದ್ದಾರೆ.

ಬಾನು ಮುಷ್ತಾಕ್ ಅವರನ್ನು ನಾಡ ಹಬ್ಬದ ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವ ಸರ್ಕಾರದ ತೀರ್ಮಾನವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿಯೇ ಇದ್ದು, ನಾಡಿನ ಜಾತ್ಯಾತೀತತೆಗೆ ಸಲ್ಲಿಸಿರುವ ಗೌರವವಾಗಿದೆ. ಈ ಹಿಂದೆ ಇಲ್ಲದ ವಿರೋಧ ಈಗ ಕಂಡು ಬರುತ್ತಿದ್ದು, ಇದು ಮಹಿಳಾ ವಿರೋಧಿ ನಿಲುವಷ್ಟೇ ಅಲ್ಲ, ಒಂದು ರಾಜಕೀಯ ವರ್ಗದ ಅನ್ನ ಮತ್ತು ಅಧಿಕಾರದ ಪ್ರಶ್ನೆ ಅಡಗಿದೆ ಎಂದಿದ್ದಾರೆ.

ದಸರಾ ಧಾರ್ಮಿಕವಲ್ಲ:

ನಾಡಹಬ್ಬ ದಸರಾ ಕೇವಲ ಧಾರ್ಮಿಕ ಹಬ್ಬವಾಗಿ ಜನರ ಮನಸ್ಸನ್ನು ಆಕರ್ಷಿಸಿಲ್ಲ. ಯಾವುದೇ ಊರಿನ ಜಾತ್ರೆಗಳು ಪೂರ್ತಿಯಾಗಿ ಧಾರ್ಮಿಕವಾಗಲು ಸಾಧ್ಯವೇ ಇಲ್ಲ. ಸಾರ್ವಜನಿಕ ಹಬ್ಬಗಳಲ್ಲಿ ದೇವರು ಪವಿತ್ರ ಜಾಗದಿಂದ ಹೊರ ಬಂದು ಜಾತ್ಯಾತೀತರಾಗುತ್ತಾರೆ. ಇದರಲ್ಲೇ ನಮ್ಮ ನಾಡಿನ ಅಸ್ಮಿತೆ ಅಡಗಿದೆ ಎಂದು ಹೇಳಿದ್ದಾರೆ.

ಜಯಚಾಮರಾಜೇಂದ್ರ ಒಡೆಯರ್ ಅವರು ಮೈಸೂರಿನ ಅರಸರಾಗಿದ್ದಾಗ ಆನೆಯು ಹೊತ್ತು ತರುತ್ತಿದ್ದ ಪಲ್ಲಕಿಯ ಮೇಲೆ ತಾವೇ ಆಸೀನರಾಗಿರುತ್ತಿದ್ದರು. ಈಗ ನಾಡದೇವತೆ ಚಾಮುಂಡೇಶ್ವರಿಯ ವಿಗ್ರಹವನ್ನು ಕನ್ನಡದ ಪ್ರಾತಿನಿಧಿಕ ಸಂಕೇತವನ್ನಾಗಿ ಪಲ್ಲಕಿಯಲ್ಲಿ ಕೂರಿಸುವುದು ಹೇಗೆ ಧಾರ್ಮಿಕತೆಯ ಕುರುಹಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ವಿಜಯನಗರದ ಪತನದ ನಂತರ ಮೈಸೂರಿನಲ್ಲಿ ದಸರಾ ಆಚರಣೆ ಆರಂಭವಾಗಿದ್ದು, ಹಂಪಿಯಲ್ಲಿ ನಡೆಯುತ್ತಿದ್ದ ದಸರಾ ದಿಬ್ಬಣದಲ್ಲಿ ಮುಸ್ಲಿಂ ಅರಬ್ಬರು, ತುರ್ಕರು ಅಥವಾ ಪರ್ಷಿಯನರು ಪಾಲ್ಗೊಳುತ್ತಿದ್ದ ಬಗ್ಗೆ ಸಂಶೋಧನೆಗಳು ದಾಖಲಿಸಿವೆ. ಇಂದಿನ ಅನಗತ್ಯ ವಿರೋಧವು ನಮ್ಮ ಸಮಾಜವನ್ನು ನೂರಾರು ವರ್ಷಗಳ ಹಿಂದಕ್ಕೆ ಕೊಂಡೊಯ್ಯುವಂತೆ ಕಂಡಿದೆ. ಕುವೆಂಪು ಅವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದರು. ಅವರ ಆಶಯಕ್ಕೆ ಭಂಗ ತರದ ರೀತಿಯಲ್ಲಿ ನಾವು ಬಾಳಬೇಕಿದೆ ಎಂದು ಹೇಳಿದ್ದಾರೆ.

ಕನ್ನಡ ಸಾಮರಸ್ಯದ ನೆಲೆಗಳು: ಈ ವಿರೋಧಗಳು ನಮ್ಮ ಮುಂದಿನ ಜನಾಂಗವನ್ನು ದಾರಿ ತಪ್ಪಿಸುವಂತದ್ದಾಗಿದೆ. ನಾಡಿನ ಬಗ್ಗೆ ಯುವ ಜನತೆಗೆ ಪರಿಚಯಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ‘ಕನ್ನಡ ಸಾಮರಸ್ಯದ ನೆಲೆಗಳು’ ಶೀರ್ಷಿಕೆಯಡಿ 40 ಕೃತಿಗಳ ಲೋಕಾರ್ಪಣೆ ಮಾಡಲಿದೆ. ಈ ಕೃತಿಗಳು ಕರ್ನಾಟಕ ತನ್ನ ಸಾಮರಸ್ಯದ ಅಸ್ಮಿತೆಯನ್ನು ಹೇಗೆ ಉಳಿಸಿಕೊಂಡಿದೆ ಎಂಬುದನ್ನು ಪರಿಚಯಸಲಿವೆ ಎಂದಿದ್ದಾರೆ.