ಬೆಂಗಳೂರು: ಸರ್ಕಾರಿ ವೈದ್ಯರು ಔಷಧ ಚೀಟಿಯನ್ನು ಕನ್ನಡದಲ್ಲಿ ಬರೆಯುವಂತೆ ಶೀಘ್ರ ಆದೇಶ ಹೊರಡಿಸಬೇಕು ಎಂದು ಆರೋಗ್ಯ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮನವಿ ಮಾಡಿದೆ.
ಸರ್ಕಾರಿ ವೈದ್ಯರೆಲ್ಲರೂ ಕನ್ನಡದಲ್ಲಿಯೇ ಔಷಧ ಚೀಟಿ ಬರೆಯುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಪತ್ರ ಬರೆದು ಒತ್ತಾಯಿಸಿದ್ದಾರೆ. ರಾಯಚೂರಿನ ವೈದ್ಯರೊಬ್ಬರು ಔಷಧ ಚೀಟಿಗಳನ್ನು ಕನ್ನಡದಲ್ಲಿ ಬರೆಯುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕೆಂಬ ಕರೆಗೆ ನೂರಾರು ಕನ್ನಡಪ್ರಿಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಭಾಷಾ ಬೆಳವಣಿಗೆ ದೃಷ್ಟಿಯಿಂದ ಚೇತೋಹಾರಿ ಕ್ರಮವಾಗಿದೆ.
ಎಲ್ಲ ವೈದ್ಯರು ಇಂತಹ ಬದ್ಧತೆ ತೋರಿದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಮಹತ್ವದ ದಾರಿ ದೊರಕಿದಂತೆ ಆಗುತ್ತದೆ. ಸರ್ಕಾರದ ಆದೇಶ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗುತ್ತದೆ ಎಂದು ಹೇಳಿದ್ದಾರೆ. ಕನ್ನಡ ಪ್ರಿಯ ವೈದ್ಯರನ್ನು, ಅವರ ಭಾಷಾಪರವಾದ ಕ್ರಿಯಾಶೀಲ ಚಟುವಟಿಕೆ ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅಭಿನಂದಿಸುವ ಹಾಗೂ ಪುರಸ್ಕರಿಸುವ ಕೆಲಸವಾಗಬೇಕು. ತಾಲೂಕು/ ಜಿಲ್ಲೆ/ ರಾಜ್ಯಮಟ್ಟದಲ್ಲಿ ಪ್ರತಿವರ್ಷ ಸತ್ಕರಿಸುವ ಕಾರ್ಯಕ್ರಮಗಳು ನಡೆಯುವಂತಾಗಬೇಕು. ನಿಟ್ಟಿನಲ್ಲಿ ಸರ್ಕಾರ ನೀತಿ ರೂಪಿಸಲು ಮುಂದಾಗಬೇಕು ಎಂದು ಕೋರಿದ್ದಾರೆ.