ಮಾಗಡಿ : ತಾಲೂಕಿನ ಶ್ಯಾನಭೋಗನಹಳ್ಳಿ ವೃತ್ತದಲ್ಲಿ ನಗರದಿಂದ ಆಗಮಿಸಿದ ಕನ್ನಡದ ರಥವನ್ನು ಸಾಂಪ್ರದಾಯಕ ಕುಂಭ ಕಳಸದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ತಾಲೂಕು ಆಡಳಿತ, ಕಸಾಪ ಹಾಗೂ ಕನ್ನಡಪರ ಸಂಘಟನೆಗಳ ಸೇರಿ ಕನ್ನಡದ ರಥಯಾತ್ರೆಯನ್ನು ಸ್ವಾಗತಿಸಿಕೊಂಡರು. ತಹಸೀಲ್ದಾರ್ ಡಿ.ಪಿ. ಶರತ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಡ್ಯದಲ್ಲಿ ಡಿ.20 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಕನ್ನಡ ರಥಯಾತ್ರೆ ಸಂಚರಿಸುತ್ತಿದ್ದು, ರಥಯಾತ್ರೆಯನ್ನು ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸಿಕೊಳ್ಳುವ ಮೂಲಕ ಕನ್ನಡ ಮನಸ್ಸುಗಳಲ್ಲಿ ಭಾಷಾ ಬೆಳವಣಿಗೆ ಕುರಿತು ಜಾಗೃತಿಗೊಳಿಸಲಾಗುತ್ತಿದೆ ಎಂದರು.
ಕನ್ನಡಿಗರ ಮನಸ್ಸನ್ನು ಒಗ್ಗೂಡಿಸುವ ಕೆಲಸ ನಿರಂತರವಾಗಿ ಆಗುತ್ತಿದ್ದು, ರಥವು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ, ರಾಮನಗರಕ್ಕೆ ಬೀಳ್ಕೊಡಲಾಗುವುದು ಎಂದು ತಿಳಿಸಿದರು.
ಮಾಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಿ.ನಾ.ಪದ್ಮನಾಭ್ ಮಾತನಾಡಿ,
ತಾಲೂಕು ಆಡಳಿತ, ಕನ್ನಡದ ಮನಸ್ಸುಗಳೆಲ್ಲರೂ ಸೇರಿತಾಯಿ ಭುವನೇಶ್ವರಿ ತಾಯಿಯ ರಥವವನ್ನು ಗೌರವಯುತವಾಗಿ ಬರಮಾಡಿಕೊಳ್ಳಲಾಗಿದೆ ಎಂದರು.
ಶ್ಯಾನಭೋಗನಹಳ್ಳಿ, ವರದೇನಹಳ್ಳಿ, ಮರಲಗೊಂಡಲ, ತಿರುಮಲೆ ಮೂಲಕ ರಥಯಾತ್ರೆ ಆಗಮಿಸಿ ಮಾಂಡವ್ಯ ಕ್ಷೇತ್ರದ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ ರಥದಲ್ಲಿರುವ ಭುವನೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಪಟ್ಟಣದೆಲ್ಲೆಡೆ ಸಂಚರಿಸಿ ಕಲ್ಯಾಗೇಟ್ ವೃತ್ತದಲ್ಲಿರುವ ಗಣಪತಿ ದೇವಸ್ಥಾನ ಬಳಿ ರಥಕ್ಕೆ ಮತ್ತೊಮ್ಮೆ ಪೂಜೆ ನೆರವೇರಿತು. ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಕನ್ನಡಪರ ಸಂಘಟನೆಗಳು, ಶಿಕ್ಷಕರು, ಕನ್ನಡದ ಮನಸ್ಸುಗಳು ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ತಾಪಂ ಮಾಜಿ ಸದಸ್ಯ ಸಿ.ಜಯರಾಮ್ ಮಾತನಾಡಿದರು.
ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ಶ್ರೀಪತಿಹಳ್ಳಿ ಎನ್.ರಾಜಣ್ಣ, ಗೌರವಾಧ್ಯಕ್ಷ ಮಹಂತೇಶ್, ಉಪಾಧ್ಯಕ್ಷ ಆಗ್ರೋ ಪುರುಶೋತ್ತಮ್, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಧನಂಜಯ ನಾಯಕ್, ಕೆ.ವಿ.ಬಾಲರಘು, ಬಿಇಒ ಚಂದ್ರಶೇಖರಯ್ಯ, ಸಾಮಾಜಿಕ ಅರಣ್ಯ ಇಲಾಖೆಯ ಮಂಜುನಾಥ್, ಪಶು ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಆರೋಗ್ಯ ಇಲಾಖೆ ಹಿರಿಯ ಸಹಾಯಕ ತುಕಾರಾಂ, ನಾರಾಯಣ್, ಮೂರ್ತಿ, ರಂಗನಾಥ್ ಇತರರು ಪಾಲ್ಗೊಂಡಿದ್ದರು.