ಕನ್ನಡ ನಾಡು ನುಡಿ ರಕ್ಷಣೆಗಾಗಿ ರಾಜ್ಯಾದ್ಯಂತ ಕನ್ನಡದ ಸ್ವಯಂ ಸೇವಕರನ್ನು ಸಜ್ಜುಗೊಳಿಸಲು ನಮ್ಮ ಸಂಘಟನೆ ಮುಂದಾಗಿದ್ದು, ಇದರ ಪ್ರಯುಕ್ತ ನಗರದಲ್ಲಿ ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.12ರಂದು ಬೆಳಗ್ಗೆ 11 ಗಂಟೆಗೆ ಗಾಂಧಿ ಭವನದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಜಿಲ್ಲೆಯ 2500 ಸ್ವಯಂ ಸೇವಕರಿಗೆ ಸಾಂಕೇತಿಕವಾಗಿ ದೀಕ್ಷೆ ನೀಡಲಾಗುವುದು. ಬಳಿಕ ಜಿಲ್ಲೆಯಿಂದ ಒಟ್ಟು 4 ಸಾವಿರ ಸ್ವಯಂ ಸೇವಕರನ್ನು ತಾಲೂಕು ಮತ್ತು ಹೋಬಳಿ ಮಟ್ಟದಿಂದ ಸಜ್ಜುಗೊಳಿಸಲು ನಿರ್ಧರಿಸಿದ್ದೇವೆ. ಇವರು ನಾಡು ನುಡಿ ರಕ್ಷಣೆಯ ದೀಕ್ಷೆ ಪಡೆದು, ಕನ್ನಡಕ್ಕೆ ಅನ್ಯಾಯವಾದಾಗ ಹೋರಾಟಕ್ಕೆ ಮುಂದಿರುತ್ತಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಗದಗ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮತ್ತು ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಕರವೇ ರಾಜ್ಯ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಕೇಂದ್ರ ಸಚಿವ ಸಂಸದ ಪ್ರಲ್ಹಾದ ಜೋಶಿ, ಶಾಸಕ ಆಸಿಫ್ ಸೇಠ್, ಸಂಸದ ಜಗದೀಶ ಶೆಟ್ಟರ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ಜಿಲ್ಲೆಯ ವಿವಿಧ ಸಾಹಿತಿಗಳು, ಹಿರಿಯ ಕನ್ನಡ ಹೋರಾಟಗಾರರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಸುರೇಶ ಗವನ್ನವರ, ಗಣೇಶ ರೋಕಡೆ, ಸುಧೀರಗೌಡ ಪಾಟೀಲ, ಮಹೇಶ ಹಟ್ಟಿಹೊಳಿ, ಹೊಳೆಪ್ಪ ಸುಲಧಾಳ, ಬಾಳು ಜಡಗಿ, ದಶರಥ ಬನೋಶಿ, ಪ್ರಕಾಶ ಲಮಾಣಿ ಇತರರಿದ್ದರು. .