ಜಿಲ್ಲೆ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕುಶಾಲನಗರ ತಾಲೂಕು ಘಟಕ ಉದ್ಘಾಟನೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕುಶಾಲನಗರ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಭಾನುವಾರ ಇಲ್ಲಿನ ಪ್ರವಾಸಿ ಮಂದಿರ ಆವರಣದಲ್ಲಿರ್ಪಡಿಸಲಾಗಿತ್ತು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಎಲೆಮರೆಯ ಸಾಹಿತಿಗಳು ಬೆಳಕಿಗೆ ಬರಬೇಕು. ಹೊಸ ಸಾಹಿತಿಗಳಿಗೆ ಅವಕಾಶ ಸಿಗಬೇಕು. ಎಲ್ಲಾ ಸಾಹಿತಿಗಳಿಗೂ ಸಮಾನ ವೇದಿಕೆ ದೊರೆಯಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಫ್ಯಾನ್ಸಿ ಮುತ್ತಣ್ಣ ಮಾತನಾಡಿ ಸಾಹಿತ್ಯದ ಸಾಲುಗಳು ಕೇವಲ ಅಕ್ಷರಗಳಲ್ಲ. ಅದು ಕವಿಯ ಭಾವನೆ. ಕವಿತೆಗಳು ಮನಸ್ಸಿನಿಂದ ಹುಟ್ಟುತ್ತದೆ. ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಯಾರಿಗೂ ವ್ಯಕ್ತಪಡಿಸಲಾಗದ ಕೆಲವೊಂದು ಭಾವನೆಗಳು ಕವಿತೆಯ ರೂಪ ತಾಳುತ್ತದೆ. ಮಹಿಳೆಯರು ಹೆಚ್ಚು ಕವಿತೆಗಳನ್ನು ಬರೆಯಬೇಕು ಎಂದು ಹೇಳಿದರು.

ಕುಶಾಲನಗರ ಘಟಕದ ನೂತನ ಅಧ್ಯಕ್ಷ ಹೆಚ್.ಬಿ. ದಿನೇಶಾಚಾರಿ ಮಾತನಾಡಿ ಕುಶಾಲನಗರ ಘಟಕದ ವತಿಯಿಂದ ವಿನೂತನ ಕಾರ್ಯಕ್ರಮಗಳು, ಹಳ್ಳಿಯ ಸೊಬಗನ್ನು ಬಿಂಬಿಸುವ ಕೆಸರುಗದ್ದೆ ಸೇರಿ ಇತರ ಕ್ರೀಡಾಕೂಟಗಳು, ಹೆಚ್ಚೆಚ್ಚು ಕವಿಗೋಷ್ಠಿಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಎಲ್ಲಾ ಪ್ರತಿಭೆಗಳನ್ನು ಮುಖ್ಯ ವಾಹಿನಿಗೆ ತರುವುದು ಈ ವೇದಿಕೆಯ ಉದ್ದೇಶ ಎಂದದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಬಿ. ರಘು ಕೋಟಿ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ ಕನ್ನಡ ಸಾಹಿತ್ಯದ ಕಂಪು ಪ್ರಪಂಚದಲ್ಲೆಡೆ ಪಸರಿಸಬೇಕು. ಪ್ರತಿಯೊಬ್ಬ ಸಾಹಿತಿಗೂ ಯಾವುದೇ ತಾರತಮ್ಯವಿಲ್ಲದೆ ಮುಕ್ತ ಅವಕಾಶ ದೊರೆಯಬೇಕು, ಸಾಹಿತಿಗಳನ್ನು ಬೆಳಕಿಗೆ ತರುವಲ್ಲಿ ಪತ್ರಿಕಾ ಮಾಧ್ಯಮವು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲೆಯ ಗೌರವಾಧ್ಯಕ್ಷ ಹೆಚ್.ಜೆ. ಜವರಪ್ಪ, ಸೋಮವಾರಪೇಟೆ ಘಟಕದ ಅಧ್ಯಕ್ಷೆ ಶರ್ಮಿಳ ರಮೇಶ್ ಮಾತನಾಡಿದರು.

ಹಿರಿಯ ಸಾಹಿತಿ ಫ್ಯಾನ್ಸಿ ಮುತ್ತಣ್ಣ ಮತ್ತು ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕುಶಾಲನಗರ ತಾಲೂಕು ಘಟಕದ ಉಪಾಧ್ಯಕ್ಷ ಕೆ.ವಿ. ಅಮೃತ, ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ಪುಟ್ಟರಾಜ್, ತಾಲೂಕು ಘಟಕದ ಕಾರ್ಯದರ್ಶಿಯ ಅಂಕಿತ ಮತ್ತಿತರರು ಇದ್ದರು.