ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಾಸರಗೋಡು ಜಿಲ್ಲೆಯ ಅಚ್ಚಕನ್ನಡ ಪ್ರದೇಶಗಳಲ್ಲಿನ ಸ್ಥಳನಾಮ ಮಲಯಾಳೀಕರಣದೊಂದಿಗೆ ವಿಕೃತಿ ಪಡೆದುಕೊಳ್ಳುತ್ತಿದ್ದು, ಇದೇ ಸ್ಥಳನಾಮವನ್ನು ಸರ್ಕಾರವೇ ಪ್ರಚಾರ ನಡೆಸುವ ಮೂಲಕ ಕನ್ನಡಿಗರಿಗೆ ಹೊಡೆತ ನೀಡುತ್ತಿದೆ.
ಈಗಾಗಲೇ ಕಾಸರಗೋಡು ಜಿಲ್ಲೆಯಲ್ಲಿ ಹಲವಾರು ಹೆಸರು ಮಲಯಾಳೀಕರಣಗೊಂಡಿದ್ದು, ಕನ್ನಡಿಗರ ವಿರೋಧದ ನಡುವೆಯೂ ಅದೇ ಹೆಸರನ್ನು ನಾಮಫಲಕಗಳಲ್ಲಿ ಅಳವಡಿಸಿಕೊಂಡು ಬರಲಾಗುತ್ತಿದೆ. ಜಿಲ್ಲಾ ಕೇಂದ್ರ ಕಾಸರಗೋಡನ್ನು ಈಗಾಗಲೇ ‘ಕಾಸರಕೋಡ್’ ಎಂಬುದಾಗಿ ಸಂಬೋಧಿಸುವುದರ ಜತೆಗೆ ಬರವಣಿಗೆಯಲ್ಲೂ ಇದೇ ರೀತಿ ನಮೂದಿಸಲಾಗುತ್ತಿರುವುದು ವಿಪರ್ಯಾಸ.
ಜಿಲ್ಲೆಯ ಬೇಡಡ್ಕವನ್ನು ಬೇಡಗಂ, ಬದಿಯಡ್ಕ ಸನಿಹದ ಚೇಡಿಕಾನವನ್ನು ಚೆಡೇಕ್ಕಲ್, ಮಾಯಿಪ್ಪಾಡಿ ಸನಿಹದ ಪುಳ್ಕೂರು ಸ್ಥಳನಾಮವನ್ನು ‘ಪುಳಿಕ್ಕೂರ್’, ಕಾಸರಗೋಡಿನ ಆನೆಬಾಗಿಲನ್ನು ಆನವಾದುಕ್ಕಲ್, ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರವನ್ನು ಆನಂದಪುರ, ಕುಂಬಳೆಯನ್ನು ಕುಂಬಳಂ ಹೀಗೆ ಸ್ಥಳನಾಮವನ್ನು ವ್ಯಾಪಕವಾಗಿ ಮಲಯಾಳೀಕರಣಗೊಳಿಸಲಾಗುತ್ತಿದೆ.
ಪುತ್ತಿಗೆ ಪಂಚಾಯಿತಿಯ ಪದ್ಯಾಣ ಎಂಬ ಜಾಗವನ್ನು ಇಂದು ‘ಪಜ್ಜಾಣ’ ಎಂದೇ ಸಂಬೋಧಿಸಲಾಗುತ್ತಿದೆ. ಕುಂಜಾರು ಸನಿಹದ ಕೊರತ್ತಿಗುಂಡಿಯನ್ನು ಮಲಯಾಳೀಕರಣಗೊಳಿಸಿ ‘ಕೊರತ್ತಿಕುಂಡು’ ಎಂಬುದಾಗಿ ನಮೂದಿಸಲಾಗಿದೆ. ಜಿಲ್ಲೆಯಲ್ಲಿ ಒಂದೊಂದಾಗಿ ಜಾಗದ ಹೆಸರನ್ನು ಸದ್ದಿಲ್ಲದೆ ಮಲೆಯಾಳೀಕರಣಗೊಳಿಸಲಾಗುತ್ತಿದ್ದು, ಮುಂದೊಂದು ದಿನ ಕನ್ನಡದ ಸ್ಥಳನಾಮ ಸಂಪೂರ್ಣ ಮಾಯವಾಗುವುದು ನಿಶ್ಚಿತ.
ಜಿಲ್ಲೆಯ ಕನ್ನಡ ನಾಮಾಂಕಿತ ಪ್ರದೇಶದ ಹೆಸರನ್ನು ಮಲಯಾಳೀಕರಣಗೊಳಿಸುತ್ತಿರುವ ಗಂಭೀರ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕಲ್ಪಿಸಲು ಕರ್ನಾಟಕ ರಾಜ್ಯ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ತಜ್ಞ ಸಮಿತಿಯನ್ನು ನಿಯೋಜಿಸಿದೆ.
ವಿರೋಧಕ್ಕೆ ಬೆಲೆಯಿಲ್ಲ
ಈ ಹಿಂದೆ ಎಣ್ಮಕಜೆ ಪಂಚಾಯಿತಿಯ ‘ಮೈರೆ’ ಗ್ರಾಮದ ಹೆಸರನ್ನೇ ಬದಲಾಯಿಸಿ ಶೇಣಿ ಎಂದು ಮಾಡಲಾಗಿದೆ. ‘ಮೈರೆ’ ಎಂಬುದು ಮಲಯಾಳದಲ್ಲಿ ಅಶ್ಲೀಲ ಪದವನ್ನು ಸೂಚಿಸುತ್ತಿದ್ದು, ಇದು ಮಲಯಾಳಿಗರನ್ನು ಮುಜುಗರಕ್ಕೀಡು ಮಾಡುತ್ತಿರುವುದರಿಂದ ಈ ಹೆಸರನ್ನು ಬದಲಾಯಿಸಿರುವುದಾಗಿ ಸರ್ಕಾರ ಸಮಜಾಯಿಷಿ ನೀಡಿತ್ತು! ಆದರೆ ಮಯೂರಗಳ ಗುಂಪು ಗುಡ್ಡದಲ್ಲಿ ಸುತ್ತಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಈ ಹೆಸರು ಬಂದಿತ್ತು ಎಂಬುದಾಗಿ ಇಲ್ಲಿನ ಹಿರಿಯರು ನೆನಪಿಸುತ್ತಿದ್ದರೂ ಮಲಯಾಳ ಹೇರುವಿಕೆಯ ಕಾಲಘಟ್ಟದಲ್ಲಿ ಅಚ್ಚಕನ್ನಡದ ಸುಂದರ ಹೆಸರು ಬದಲಾವಣೆ ಬಗ್ಗೆ ನಡೆದ ವಿರೋಧಕ್ಕೆ ಬೆಲೆಯಿಲ್ಲದಾಗಿದೆ.
ಗಡಿನಾಡ ಕನ್ನಡಿಗರ ಸಮಸ್ಯೆಗೆ ಸದಾ ಸ್ಪಂದಿಸುತ್ತಿರುವ ಪ್ರಾಧಿಕಾರ, ಇಲ್ಲಿನ ಸ್ಥಳನಾಮ ಮಲಯಾಳೀಕರಣಗೊಳ್ಳುತ್ತಿರುವ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿದ್ದು, ಇದರ ಅಧ್ಯಯನಕ್ಕಾಗಿ ಸಮಿತಿಯೊಂದನ್ನು ರಚಿಸಿದೆ. ಐದು ಮಂದಿಯನ್ನೊಳಗೊಂಡ ತಜ್ಞ ಸಮಿತಿ ಅಧ್ಯಯನ ನಡೆಸಿ ನೀಡುವ ವರದಿ ಆಧಾರದಲ್ಲಿ ಪ್ರಾಧಿಕಾರ ಅಧ್ಯಕ್ಷರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಎ.ಆರ್.ಸುಬ್ಬಯ್ಯಕಟ್ಟೆ, ಸದಸ್ಯರು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ] https://www.vijayavani.net/belthangady-pattana-panchayat-general-meeting-2