ಜಿಲ್ಲೆ

ಪ್ರಭು ಶ್ರೀರಾಮಚಂದ್ರ ಪೂಜಿಸಿರುವ ಲಿಂಗ

reportermys

ಕೆ.ಎಸ್. ನಾಗೇಶ್ ಕುಶಾಲನಗರ
ಕುಶಾಲನಗರದಿಂದ ೮ ಕಿಲೋಮೀಟರ್ ದೂರದಲ್ಲಿರುವ ರಾಮಸ್ವಾಮಿ ಕಣಿವೆ ಗ್ರಾಮದಲ್ಲಿ ಪ್ರಭು ಶ್ರೀರಾಮಚಂದ್ರ ಮರಳಿನಿಂದ ಲಿಂಗ ಮಾಡಿ ಪೂಜಿಸಿರುವ ಪವಿತ್ರ ಕ್ಷೇತ್ರವೇ ಶ್ರೀ ಕಣಿವೆ ರಾಮಲಿಂಗೇಶ್ವರ ದೇಗುಲ.

ಭಗವಾನ ರಾಮನು ಸೀತೆಯನ್ನು ಹುಡುಕಿಕೊಂಡು ಬರುವಾಗ ಕಣಿವೆಗೂ ಬಂದಿದ್ದು, ಇಲ್ಲಿಗೆ ಬರುವಾಗ ಸಂಜೆಯ ಪೂಜಾ ಸಮಯ ವಾಗಿತ್ತು. ಈಶ್ವರ ಲಿಂಗ ಪೂಜೆ ಮಾಡದೇ ರಾಮ ಮುಂದಿನ ಯಾವುದೇ ಕೆಲಸ ಮಾಡುವಂತೆ ಇರಲಿಲ್ಲ . ಕಾವೇರಿ ನದಿ ತಟದಲ್ಲಿ ಯಾವುದೇ ಲಿಂಗ ಇರಲಿಲ್ಲ. ಹೀಗಾಗಿ ಲಿಂಗ ಹುಡುಕುವಂತೆ ಹನುಮನಿಗೆ ಹೇಳಲಾಯಿತು. ಹನುಮ ಹುಡುಕುತ್ತಾ ಹೊರಟ. ಸಮಯ ಮುಗಿಯುತ್ತಾ ಬಂದರೂ ಹನುಮನ ಸುಳಿವು ಕಾಣಲಿಲ್ಲ. ಹೀಗಾಗಿ ರಾಮನೇ ಇಷ್ಟ ಲಿಂಗವನ್ನು ಮರಳಿನಲ್ಲಿ ಮಾಡಬೇಕಾಯಿತು.

ರಾಮ ಲಿಂಗ ಪೂಜೆ ಆರಂಭ ಮಾಡಬೇಕು ಅನ್ನುವಷ್ಟರಲ್ಲಿ ಹನುಮನೂ ಶಿವಲಿಂಗ ಸಮೇತ ಬಂದ. ಹೀಗೆ ಎರಡು ಲಿಂಗಗಳಾದವು. ನದಿ ತಟದಲ್ಲಿ ಇರುವ ಲಿಂಗವನ್ನು ಶ್ರೀರಾಮನೂ, ಹನುಮ ತಂದಿದ್ದ ಲಿಂಗವನ್ನು ಪಕ್ಕದಲ್ಲಿ ಇರುವ ಗುಡ್ಡದ ಮೇಲೆ ಲಕ್ಷ್ಮಣನೂ ಸ್ಥಾಪನೆ ಮಾಡಿದರು ಅನ್ನುವ ನಂಬಿಕೆ ಭಕ್ತರದ್ದು.

ಈ ಕ್ಷೇತ್ರದಲ್ಲಿ ರಾಮಲಿಂಗೇಶ್ವರ, ಲಕ್ಶಣೀಶ್ವರ, ಹರಿಹರೇಶ್ವರ ಗುಹೇಶ್ವರ, ನಂದೀಶ್ವರ ದೇವಸ್ಥಾನಗಳಿವೆ. ಕಣಿವೆಯನ್ನು ರಾಮಸ್ವಾಮಿ ಕಣಿವೆ ಅಂತಲೂ, ದಕ್ಷಿಣ ಕಾಶಿ ಅಂತಲೂ ಕರಿಯುತ್ತಾರೆ. ಟಿಪ್ಪು ಕಾಲದಲ್ಲಿ ಮಾನವ ನಿರ್ಮಿತ ಗುಡ್ಡದಲ್ಲಿ ಹರಿಹರೇಶ್ವರ ದೇವನನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತಿದೆ. ಬಸವೇಶ್ವರನನ್ನು ಗ್ರಾಮದ ಮಧ್ಯಭಾಗದಲ್ಲಿ ಕುಳ್ಳಿರಿಸಿ ಪೂಜೆ ಆಗುತ್ತಿದೆ.

ಲಕ್ಶಣೇಶ್ವರ ಸಮೀಪದಲ್ಲೇ ಇರುವ ಗುಹೇಶ್ವರ ಮಾತ್ರ ಪುರಾತನ ಕಾಲದಲ್ಲಿ ಇದ್ದ ಹಾಗೆಯೇ ಇರುವುದು ಇಲ್ಲಿಯ ವಿಶೇಷ. ದೊಡ್ಡ ದೊಡ್ಡ ಬಂಡೆಗಳ ನಡುವೆ ಪ್ರಕೃತಿದತ್ತವಾಗಿ ಇದ್ದ ಗುಹೆಯಲ್ಲಿ ಗುಹೇಶ್ವರ ಇದೆ. ಇಲ್ಲಿಯ ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಕ್ರೈಸ್ತರು, ಮುಸ್ಲಿಮರು ಮತ್ತು ಹಿಂದುಗಳು ಸೇವೆ ಸಲ್ಲಿಸಿದ್ದಾರೆ.

ರಥೋತ್ಸವ
ಶ್ರೀರಾಮನವಮಿಯಂದು ಬೇರೆಲ್ಲೂ ಕಾಣಲು ಸಿಗದ ಶ್ರೀರಾಮನ ರಥೋತ್ಸವ ಅದ್ದೂರಿಯಾಗಿ ನಡೆಯುತ್ತೆ. ಆ ದಿನ ಪಕ್ಕದ ಹೆಬ್ಬಾಲೆ ಗ್ರಾಮದವರು ಕಾಶಿಯಿಂದ ವಿಶೇಷವಾಗಿ ಗಂಗಾ ಜಲವನ್ನು ತರೆಸಿ, ಪಲ್ಲಕ್ಕಿ ಮೂಲಕ ಕಣಿವೆಯ ರಾಮಲಿಂಗೇಶ್ವರ ದೇವರಿಗೆ ಅಭಿಷೇಕ ಮಾಡಿಸುವ ವಾಡಿಕೆಯಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಮೈಸೂರು ಜಿಲ್ಲೆಯ ಹಲವು ಭಾಗಗಳಿಂದ ಭಕ್ತಾದಿಗಳು ಬಂದು ಪೂಜೆ ಮಾಡಿಸುವುದು ಸಾಮಾನ್ಯ.

**
ಮಧ್ಯಮ ವರ್ಗದ ಮತ್ತು ಬಡ ವರ್ಗದ ಜನರಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪ ಮಾಡಿಸಿದ್ದೇವೆ. ಸಕಲ ಸೌಲಭ್ಯ ದೊರೆಯುವ, ಕಾವೇರಿ ನದಿ ದಂಡೆಯಲ್ಲಿ, ಅತ್ಯಂತ ಪುರಾತನ ಕ್ಷೇತ್ರದಲ್ಲಿ ಯಾವುದೇ ಪುಣ್ಯ ಕಾರ್ಯ ಮಾಡಿಸಿದರೆ ಒಳ್ಳೆಯದು ಎನ್ನುವ ಕಾರಣಕ್ಕೆ ರಾಜ್ಯದ ಹಲವು ಭಾಗಗಳಿಂದ ಇಲ್ಲಿಗೆ ಬಂದು ಶುಭ ಕಾರ್ಯ ಮಾಡುತ್ತಾರೆ. ಕೆ.ಎನ್. ಸುರೇಶ್, ಅಧ್ಯಕ್ಷರು, ಶ್ರೀರಾಮಲಿಂಗೇಶ್ವರ ದೇವಾಲಯ ಸಮಿತಿ, ರಾಮಸ್ವಾಮಿ ಕಣಿವೆ.

**
ಇಲ್ಲಿಗೆ ಹರಕೆ ಹೊತ್ತರೆ ಸಾಕು. ಭಕ್ತರ ಕೋರಿಕೆಯನ್ನು ಖಂಡಿತ ಶ್ರೀರಾಮನು ಈಡೇರಿಸುತ್ತಾನೆ. ಪ್ರತಿದಿನ ದೇವಾಲಯಕ್ಕೆ ಭೇಟಿ ನೀಡು ವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಶ್ರೀರಾಮನ ಶಕ್ತಿ ಮತ್ತು ಕ್ಷೇತ್ರದ ಮಹಿಮೆ ಇನ್ನಷ್ಟು ಜನರಿಗೆ ತಲುಪುವಂತೆ ಆಗಬೇಕು. ರಾಘವೇಂದ್ರಾಚಾರ್, ಅರ್ಚಕರು, ಶ್ರೀ ರಾಮಲಿಂಗೇಶ್ವರ ದೇವಾಲಯ, ರಾಮಸ್ವಾಮಿ ಕಣಿವೆ.

**
ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಪಟ್ಟಿಯಲ್ಲಿ ಕಣಿವೆ ಗ್ರಾಮವನ್ನು ಸೇರಿಸಿ ಈ ಕ್ಷೇತ್ರವನ್ನು ಇನ್ನಷ್ಟು ಮುನ್ನೆಲೆಗೆ ತರಬೇಕು. ಪವಿತ್ರವಾದ ಕ್ಷೇತ್ರದ ಜೊತೆಗೆ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಅಕ್ವಡೇಟ್, ತೂಗು ಸೇತುವೆ ಅತ್ಯಂತ ಆಕರ್ಷಕವಾಗಿದೆ. ಇತಿಹಾಸ ಪ್ರಸಿದ್ಧ ದೇವರ ದರ್ಶನ ಮಾಡಿಸುವ ಕೆಲಸವಾಗಬೇಕು. ಕೆ.ಎಸ್. ಮಾಧವ, ಕಾರ್ಯದರ್ಶಿ, ಶ್ರೀ ರಾಮಲಿಂಗೇಶ್ವರ ದೇವಾಲಯ, ರಾಮಸ್ವಾಮಿ ಕಣಿವೆ.

**
ಯುವಜನತೆಗೆ ಆಕರ್ಷಕವಾಗುವ ರೀತಿಯಲ್ಲಿ ೨ ಸಣ್ಣ ಗುಡ್ಡಗಳ ಮೇಲೆ ಲಕ್ಷ್ಮಣೇಶ್ವರ ಮತ್ತು ಹರಿಹರೇಶ್ವರ ದೇವಸ್ಥಾನವಿದೆ. ಆ ಗುಡ್ಡದ ಮೇಲೆ ನಿಂತು ಕಾವೇರಿ ನದಿ ಹರಿಯುವುದನ್ನು ನೋಡುವುದೇ ಮನಸ್ಸಿಗೆ ಆನಂದ ತರುತ್ತೆ. ಇಂತಹ ಪವಿತ್ರ ಪುಣ್ಯಕ್ಷೇತ್ರದ ನಿವಾಸಿಯಾಗಿ ರುವುದೇ ನಮ್ಮ ಭಾಗ್ಯ. ಕೆ.ಎಂ. ರಾಕೇಶ್, ಸ್ಥಳೀಯ ನಿವಾಸಿ, ರಾಮಸ್ವಾಮಿ ಕಣಿವೆ.