ಮಡಿಕೇರಿ:
ಕೊಡಗಿನ ಕುಶಾಲನಗರ ತಾಲೂಕು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಧ್ಯೆ ಬಾಂಧವ್ಯದ ಬೆಸುಗೆಯಾಗಿದ್ದ ರಾಮಸ್ವಾಮಿ ಕಣಿವೆಯ ತೂಗು ಸೇತುವೆ ಬಂದ್ ಮಾಡಲಾಗಿದೆ. ಮಳೆಗಾಲದಲ್ಲಿ ಈ ಸೇತುವೆ ಮೇಲೆ ಓಡಾಟ ಅಪಾಯಕಾರಿ ಎನ್ನುವ ಕಾರಣಕ್ಕೆ ಮಂಗಳವಾರ ಗೇಟ್‌ಗೆ ತಂತಿಯ ಬಲೆ ಹೊಡೆದು ಮುಚ್ಚಲಾಗಿದೆ. ಕಳೆದ ನಾಲ್ಕು ವರ್ಷ ಹಿಂದೆಯೇ ಹಾಳಾಗಿದ್ದ ಈ ಸೇತುವೆಯನ್ನು ಸಕಾಲದಲ್ಲಿ ದುರಸ್ತಿ ಮಾಡಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಗಡಿಭಾಗದ ಗ್ರಾಮಗಳಾದ ದೊಡ್ಡ ಕಮರಹಳ್ಳಿ, ಶ್ಯಾನುಬೊಗನಹಳ್ಳಿ, ದಿಂಡಿಗಾಡು, ಮುತ್ತಿನಮುಳ್ಳುಸೋಗೆ, ಕಣಗಾಲು, ಹನುಮಂತಪುರ, ಕರಡಿ ಲಕ್ಕನ ಕೆರೆ ಕಾವೇರಿ ನದಿಯ ಒಂದು ಕಡೆ ಇದ್ದರೆ ಮತ್ತೊಂದು ಕಡೆಯಲ್ಲಿ ಕೊಡಗಿನ ಕಣಿವೆ, ಭುವನಗಿರಿ, ಹುಲುಸೆ, ಹಕ್ಕೆ, ಕೂಡಿಗೆ, ಮರೂರು, ಹೆಬ್ಬಾಲೆ ಮತ್ತಿತರ ಗ್ರಾಮಗಳು ಇವೆ. ಇವೆರಡೂ ಗ್ರಾಮಗಳ ಜನರ ನಡುವೆ ಉತ್ತಮ ಬಾಂಧವ್ಯ ಇದೆ. ನೆಂಟಸ್ಥನಗಳೂ ನಡೆಯುತ್ತಿರುತ್ತದೆ.
ಪಕ್ಕದ ತಾಲೂಕಿನವರಿಗೆ ಹತ್ತಿರದ ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಅಗತ್ಯ ವಸ್ತುಗಳು ಬೇಕಾದರೂ ಕಾವೇರಿ ನದಿಯನ್ನು ದಾಟಲೇಬೇಕು. ಕುಶಾಲನಗರದ ಕೈಗಾರಿಕಾ ಬಡಾವಣೆಯಲ್ಲಿ ಅತ್ತ ಕಡೆಯ ಸಾವಿರಾರು ಜನರು ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ವಿವಿಧ ರೀತಿಯ ಉದ್ಯೋಗವಕಾಶಗಳಿಗಾಗಿ ಪ್ರತಿನಿತ್ಯ ಓಡಾಡುವವರೂ ಇದ್ದಾರೆ. ಇವರಿಗೆಲ್ಲಾ ರಾಮಸ್ವಾಮಿ ಕಣಿವೆಯ ಈ ತೂಗು ಸೇತುವೆಯೇ ಸುಲಭದ ಸಂಪರ್ಕ ದಾರಿ.
ಇದು 18 ವರ್ಷಗಳ ಹಿಂದೆ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿAದ 48 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ತೂಗು ಸೇತುವೆ. ಈ ತೂಗು ಸೇತುವೆ ನಿರ್ಮಾಣ ಆಗುವುದಕ್ಕೂ ಮೊದಲು ಎರಡೂ ಕಡೆಯವರು ಅತ್ತಿತ್ತ ಓಡಾಡಲು ಹಾರಂಗಿ ಎಡದಂಡೆ ನಾಲೆಯ ಅಪಾಯಕಾರಿ ಮೇಲ್ಗಾಲುವೆ ಅವಲಂಬಿಸಿದ್ದರು. ನಂತರದ ದಿನಗಳಲ್ಲಿ ಇಲ್ಲಿಗೊಂದು ನಾಡದೋಣಿ ವ್ಯವಸ್ಥೆಯೂ ಆಯಿತು. ಆದರೆ ಈ ದೋಣಿ ದುರಸ್ತಿಯಾಗಿ ಮೂಲೆ ಸೇರಿದ ನಂತರ ಸುಮಾರು 20-30 ಕಿಮೀ ಸುತ್ತು ಬಳಸಿ ರಸ್ತೆ ಮಾರ್ಗದಲ್ಲಿ ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿತ್ತು.
ಈ ಸಂದರ್ಭದಲ್ಲಿ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಇಲ್ಲಿಗೆ ತೂಗು ಸೇತುವೆ ನಿರ್ಮಿಸಿ ಕೊಡುವಲ್ಲಿ ಯಶಸ್ವಿ ಆಗಿದ್ದರು. ಕೊಡಗು ಮತ್ತು ಮೈಸೂರು ಜಿಲ್ಲೆಗೆ ಅತೀ ಹತ್ತಿರದಲ್ಲಿ ಸಂಪರ್ಕ ಕಲ್ಪಿಸುವ ಈ ಸೇತುವೆಯಿಂದ ಬಹಳಷ್ಟು ಜನರಿಗೆ ದೊಡ್ಡ ಮಟ್ಟದಲ್ಲಿ ಉಪಯೋಗ ಆಗುತ್ತಿತ್ತು.
2018ರಲ್ಲಿ ಜಿಲ್ಲೆಯಲ್ಲಿ ಸುರಿದ ಮಹಾಮಳೆ ಸಂದರ್ಭ ಕಾವೇರಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಈ ಸೇತುವೆಗೆ ಹಾನಿ ಆಗಿತ್ತು. ತೂಗು ಸೇತುವೆಯ ಮೇಲೆ ನೀರು ಹರಿದ ಪರಿಣಾಮದಿಂದ ಕಬ್ಬಿಣದ ರಾಡುಗಳು ಮತ್ತು ಅದಕ್ಕೆ ಅಳವಡಿಸಿದ್ದ ಕಾಂಕ್ರೀಟ್ ಮೆಟ್ಟಿಲುಗಳು ಹಾಳಾಗಿದವು. ನಂತರ ಸ್ವಲ್ಪ ಮಟ್ಟಿಗೆ ದುರಸ್ತಿ ಕಾರ್ಯ ನಡೆದರೂ 2019ರ ಕುಂಭದ್ರೋಣ ಮಳೆಗಾಲದಲ್ಲಿ ಮತ್ತೆ ಹಾನಿಗೆ ಒಳಗಾಯಿತು. ಹಾಳಾದ ಮೆಟ್ಟಿಲುಗಳನ್ನು 2020ರಲ್ಲಿ ಪುನಃ ದುರಸ್ತಿ ಮಾಡಿ ಅಳವಡಿಸಲಾಯಿತು.
ಆದರೆ 2021ರ ಗಾಳಿ ಮಳೆಯಿಂದಾಗಿ ಸೇತುವೆ ಮುಂಭಾಗದಲ್ಲಿ ಮತ್ತು ಅಲ್ಲಲ್ಲಿ ಅಳವಡಿಕೆ ಮಾಡಲಾಗಿದ್ದ ಕಬ್ಬಿಣದ ರಾಡುಗಳು ಪುನಃ ತುಂಡಾಗಿ ಕತ್ತರಿಸಿ ಬಿದ್ದವು. ನಂತರ ಇದನ್ನು ದುರಸ್ತಿ ಮಾಡಲು ಯಾರು ಕೂಡ ಮುಂದಾಗಿಲ್ಲ. ಇಂಥ ಅಪಾಯಕಾರಿ ಸೇತುವೆಯ ಮೇಲೆಯೇ ಕಳೆದ ನಾಲ್ಕು ವರ್ಷಗಳಿಂದ ದಿನಂಪ್ರತಿ ಸಾವಿರಾರು ಸಾರ್ವಜನಿಕರು, ಮೈಸೂರು ಜಿಲ್ಲೆಯ 20 ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು, ಕಾರ್ಮಿಕರು, ರೈತರು ಓಡಾಡುತ್ತಿದ್ದರು.
ಇದೀಗ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು, ಕಾವೇರಿ ಮತ್ತು ಹಾರಂಗಿ ನದಿಗಳು ತುಂಬಿ ಹರಿಯುತ್ತಿದೆ. ಹಾಗಾಗಿ ಕಣಿವೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯ ತಪ್ಪಿಸಲು ಕುಶಾಲನಗರ ತಾಲೂಕು ಆಡಳಿತ ತೂಗು ಸೇತುವೆಯನ್ನೇ ಬಂದ್ ಮಾಡಿದೆ. ಸೇತುವೆಯ ದ್ವಾರವನ್ನು ಕಬ್ಬಿಣದ ಬಲೆ ಅಳವಡಿಸಿ ಮುಚ್ಚಲಾಗಿದೆ. ಉಳಿದೆಡೆ ಗೇಟ್‌ಗಳಿಗೆ ಬೀಗ ಹಾಕಲಾಗಿದೆ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಣಿವೆಯ ಶ್ರೀ ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವಕ್ಕೆ ಆಗಮಿಸಿದ್ದ ಸಂದರ್ಭ ದೇವಾಲಯ ಸಮಿತಿಯವರ ಮನವಿ ಹಿನ್ನೆಲೆಯಲ್ಲಿ ಹಾಳಾಗಿದ್ದ ತೂಗು ಸೇತುವೆ ವೀಕ್ಷಣೆ ಮಾಡಿದ್ದರು. ಈ ವೇಳೆ ಸೇತುವೆ ದುರಸ್ತಿಗೆ ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಈತನಕ ಯಾವುದೇ ಪ್ರಯೋಜನ ಆಗಿಲ್ಲ. ಒಂದು ವೇಳೆ ಸೇತುವೆಯನ್ನು ಸರಿಪಡಿಸಿ ಸುಸ್ಥಿತಿಯಲ್ಲಿ ಇಟ್ಟುಕೊಂಡಿದ್ದರೆ ಇಂದು ಬಂದ್ ಮಾಡುವ ಸ್ಥಿತಿ ಬರುತ್ತಿರಲಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ
ನಾನು ಜಿ.ಪಂ. ಅಧ್ಯಕ್ಷ ಆಗಿದ್ದ ಸಂದರ್ಭ ಕಣಿವೆ ತೂಗುಸೇತುವೆ ನಿರ್ಮಾಣಕ್ಕೆ ಜಿ.ಪಂ.ನಿAದ 10 ಲಕ್ಷ ರೂ. ಮಂಜೂರು ಮಾಡಲಾಗಿತ್ತು. ಆದರೆ ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದ ಕಾರಣ ಕಾಮಗಾರಿ ನಡೆಯದೇ ಈ ಹಣ ವಾಪಾಸ್ಸಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು. ನಂತರ ಅಪ್ಪಚ್ಚುರಂಜನ್ ಶ್ರಮದಿಂದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಇಲ್ಲಿ ಸೇತುವೆ ನಿರ್ಮಾಣ ಆಯಿತು. ಆದರೆ ನಿರ್ವಹಣೆ ಕೊರತೆಯಿಂದ ಸೇತುವೆ ಹಾಳಾಗಿದೆ. ಸಕಾಲದಲ್ಲಿ ದುರಸ್ತಿ ಮಾಡದೇ ಈಗ ಸೇತುವೆಯನ್ನೇ ಮುಚ್ಚುವ ಸ್ಥಿತಿ ಬಂದಿದೆ.
ಹೆಚ್.ಎಸ್. ಅಶೋಕ, ಮಾಜಿ ಅಧ್ಯಕ್ಷ, ಕೊಡಗು ಜಿ.ಪಂ.
ಕುಶಾಲನಗರ ತಾಲೂಕು ಕಣಿವೆ ತೂಗು ಸೇತುವೆ ಪರಿಶೀಲನೆ ನಡೆಸಲಾಗಿದೆ. ಮಳೆ ಹೆಚ್ಚಿರುವುದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಯನ್ನು ಮುಚ್ಚಲಾಗಿದೆ. ಪ್ರವಾಸಿಗರು ತೆರಳದಂತೆ ರಾಮೇಶ್ವರ ದೇವಾಲಯದ ಬಳಿ ಹೊಳೆಗೆ ಹೋಗುವ ಗೇಟ್‌ಗೆ ಕೂಡ ಬೀಗ ಅಳವಡಿಸಲಾಗಿದೆ.
ಕಿರಣ್ ಗೌರಯ್ಯ, ತಹಸೀಲ್ದಾರ್, ಕುಶಾಲನಗರ ತಾಲೂಕು