ಜಿಲ್ಲೆ

ಕಣಿವೆ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ತಾಲೂಕು ರಂಗಸ್ವಾಮಿ ಕಣಿವೆಯ ಶ್ರೀರಾಮಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವ ಭಾನುವಾರ ಶ್ರದ್ದಾ ಭಕ್ತಿಯಿಂದ ನಡೆಯಿತು. ರಾಮಲಿಂಗೇಶ್ವರ, ಅಗಸ್ತೇಶ್ವರ, ಗುಹೇಶ್ವರ, ಲಕ್ಷ್ಮಣೇಶ್ವರ ಹಾಗೂ ಬಸವೇಶ್ವರ ಪಂಚ ಲಿಂಗಗಳ ಸನ್ನಿಧಿಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಕಾವೇರಿ ನದಿದಂಡೆಯಲ್ಲಿ ಸೇರಿದ್ದ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು.

ಶ್ರೀ ರಾಮನು ಮರಳಿನಿಂದ ಪ್ರತಿಷ್ಠಾಪಿಸಿದನೆಂಬ ಪ್ರತೀತಿ ಇರುವ ಸನ್ನಿಧಿಯಲ್ಲಿ ಬೆಂಗಳೂರಿನ ವೇದಬ್ರಹ್ಮ ನರಹರಿಶರ್ಮಾ ನೇತೃತ್ವದ ಪುರೋಹಿತರ ತಂಡ ಧಾರ್ಮಿಕ ವಿಧಿಗಳನ್ನು ಪೂರೈಸಿತು. ರಥೋತ್ಸವದ ಅಂಗವಾಗಿ ದೇವಾಲಯದ ಒಳ ಹಾಗೂ ಹೊರ ಆವರಣವನ್ನು ತಳಿರು ತೋರಣಗಳು ಮತ್ತು ಬಗೆ ಬಗೆಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಸಂಪ್ರದಾಯದAತೆ ಇದಕ್ಕೂ ಮೊದಲು ಪಕ್ಕದ ಹೆಬ್ಬಾಲೆ ಗ್ರಾಮಸ್ಥರು ಅಂಚೆಯ ಮೂಲಕ ಕಾಶಿಯಿಂದ ತರಿಸಿದ್ದ ಪವಿತ್ರ ಗಂಗಾ ಜಲವನ್ನು ಅಲಂಕೃತ ಮಂಟಪದಲ್ಲಿಟ್ಟು ಮಂಗಳವಾದ್ಯಗಳೊAದಿಗೆ ಮೆರವಣಿಗೆಯಲ್ಲಿ ಕಣಿವೆಯ ಶ್ರೀಕ್ಷೇತ್ರಕ್ಕೆ ತಂದು ದೇವರಿಗೆ ಪ್ರೋಕ್ಷಣೆ ಮಾಡಿದರು. ಬಳಿಕ ರಾಮಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಇರಿಸಿ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.

ರಥೋತ್ಸವ ಆರಂಭವಾಗುತ್ತಿದ್ದAತೆಯೇ ಅನೇಕ ಭಕ್ತರು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಬಾಳೆ ಹಣ್ಣು ಹಾಗೂ ಜವುನಗಳನ್ನು ರಥದ ಮೇಲೆ ಎಸೆದು ಭಕ್ತಿ ಮೆರೆದರು. ಇದೇ ಸಂದರ್ಭ ಚಂಡೇ ವಾದ್ಯ, ವೀರಗಾಸೆ ನೃತ್ಯ ಹಾಗೂ ಮಂಗಳ ವಾದ್ಯ ರಥೋತ್ಸವದಲ್ಲಿ ವಿಶೇಷ ಮೆರುಗು ನೀಡಿದವು.

ರಥ ಸಾಗುವ ಮಾರ್ಗದುದ್ದಕ್ಕೂ ಭಕ್ತಾಧಿಗಳಿಗೆ ಸ್ಥಳೀಯ ನಿವಾಸಿಗಳು ತಮ್ಮ ಮನೆಗಳ ಮುಂದೆ ಮಜ್ಜಿಗೆ, ಪಾನಕ, ಕೋಸಂಬರಿಗಳನ್ನು ನೀಡುವ ಮೂಲಕ ಭಕ್ತಿ ಭಾವ ಮೆರೆಯುತ್ತಿದ್ದ ದೃಶ್ಯ ಕಂಡು ಬಂತು. ರಥೋತ್ಸವಕ್ಕೆ ಕೊಡಗು ಮಾತ್ರವಲ್ಲದೆ ನೆರೆಯ ಮೈಸೂರು, ಹಾಸನ ಜಿಲ್ಲೆಯ ಗಡಿ ಗ್ರಾಮಗಳ ಭಕ್ತರೂ ಆಗಮಿಸಿದ್ದರು. ರಥೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿಯಿಂದ ಲಾಡು ಹಾಗೂ ಅನ್ನದಾನ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಥೋತ್ಸವದ ಅಂಗವಾಗಿ ಕಣಿವೆಯ ಮುಖ್ಯ ರಸ್ತೆಯಲ್ಲಿ ಮೂರು ದಿನಗಳ ಕಾಲ ವಿವಿಧ ಮಳಿಗೆಗಳನ್ನೊಳಗೊಂಡ ಜಾತ್ರೆ ನಡೆಯಲಿದೆ.

ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಕಾರ್ಯಧ್ಯಕ್ಷ ಕೆ.ಎಸ್. ಮಾಧವ, ಕಾರ್ಯದರ್ಶಿ ಟಿ.ಎನ್. ಶೇಷಾಚಲ, ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ನಿರ್ದೇಶಕರಾದ ಆರ್.ಆರ್. ಮಧು, ಕೆ.ಎಲ್. ಮಹೇಶಕುಮಾರ್, ಇ.ಎಸ್. ಗಣೇಶ್, ಕೆ.ಎಂ. ರಾಕೇಶ್, ಟಿ.ಎಂ. ಕಾರ್ತಿಕ್, ಕೆ.ಸಿ. ನಂಜುAಡಸ್ವಾಮಿ, ಅರ್ಚಕ ರಾಘವೇಂದ್ರ ಆಚಾರ್, ಉದಯಪ್ರಕಾಶ್ ಆಗೂ ದೇವಾಲಯ ಸಮಿತಿ ಪದಾಧಿಕಾರಿಗಳು ಇದ್ದರು.