ಜಿಲ್ಲೆ

‘ಕನ್ನಿಕಾ’ ಶಿಕ್ಷಣ ಸೇವೆಗೆ ನೋಬೆಲ್ ಗೌರವ: ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸಾಧಕಿ

ಮಂಡ್ಯ: ಕಳೆದ ಮೂರು ದಶಕದಿಂದ ನವೋದಯ ಪರೀಕ್ಷೆಗೆ ತರಬೇತಿ ನೀಡುವ ಮೂಲಕ ಸಾವಿರಾರೂ ಮಕ್ಕಳಿಗೆ ದಾರಿದೀಪವಾಗಿರುವ ನಗರದ ಎಚ್.ಆರ್.ಕನ್ನಿಕಾ ಅವರ ಸೇವೆಗೆ ನೋಬೆಲ್ ವರ್ಲ್ಡ್ ರೆಕಾರ್ಡ್ ಗೌರವ ದೊರೆತಿದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಎಚ್.ಆರ್.ಕನ್ನಿಕಾ ಖ್ಯಾತಿ ಪಡೆದಿದೆ. ಇವರು ‘ಕನ್ನಿಕಾ ಶಿಲ್ಪ ನವೋದಯ ತರಬೇತಿ ಸಂಸ್ಥೆ’ಯ ಮೂಲಕ ಕಳೆದ ಮೂರು ದಶಕದಿಂದ ಮಕ್ಕಳ ಶೈಕಣಿಕ ಚಟುವಟಿಕೆಗೆ ಮಾರ್ಗದರ್ಶಕರಾಗಿದ್ದಾರೆ. ಗಾಂಧಿನಗರದ ಎಚ್.ಬಿ.ರಾಮಕೃಷ್ಣ ಹಾಗೂ ಎಲ್.ಕಮಲ ಸುಪುತ್ರಿ ಕನ್ನಿಕಾ ಅವರು ಎಂ.ಎಸ್ಸಿ(ಗಣಿತ), ಎಂ.ಎ (ಸಮಾಜಶಾಸ್ತ್ರ), ಎಂ.ಎ(ಕನ್ನಡ), ಎಂ.ಫಿಲ್, ಬಿ.ಇಡಿ, ಹಿಂದಿ ವಿದ್ವಾನ್, ಹಿಂದಿ ಶಿಕ್ಷಕು(ಬಿ.ಇಡಿ), ಪಿ.ಜಿ.ಡಿ.ಎಸ್.ಇ ಉನ್ನತ ವ್ಯಾಸಂಗ ಮಾಡಿದ್ದಾರೆ. ಗಣಿತಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲಿ ವಿಶ್ವವಿದ್ಯಾನಿಲಯದಲ್ಲಿ ರ‌್ಯಾಂಕ್ ಪಡೆದಿದ್ದಾರೆ.

ಅಂತೆಯೇ ಕಳೆದ ಮೂವತ್ತು ವರ್ಷದಿಂದ ಮಂಡ್ಯದಲ್ಲಿ ನವೋದಯ ವಸತಿ ಶಾಲೆ, ಮುರಾರ್ಜಿ ವಸತಿ ಶಾಲೆ, ಸೈನಿಕ ವಸತಿ ಶಾಲೆ, ರಾಮಕೃಷ್ಣ ಆಶ್ರಮ ವಸತಿಶಾಲೆ, ಸಾಯಿ ಆಶ್ರಮ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಸೇರಿದಂತೆ ಹಲವು ವಸತಿ ಶಾಲೆಯ ಪ್ರವೇಶ ಪರೀಕ್ಷೆ ಬಯಸುವ ಮಕ್ಕಳನ್ನು ತಯಾರು ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ರೀತಿ ಅಸಂಖ್ಯಾತ ಮಕ್ಕಳ ಬದುಕು ರೂಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಂದಿನ ದಿನದಲ್ಲಿ ಶುಲ್ಕವೇ ಪಾಲಕರಿಗೆ ದೊಡ್ಡ ಹೊರೆಯಾಗಿದೆ. ಆದರೆ ಕನ್ನಿಕಾ ಅವರು ಕಡಿಮೆ ಶುಲ್ಕ ಪಡೆದು ತರಬೇತಿ ನೀಡುತ್ತಾರೆ.\

ನವೋದಯದಲ್ಲಿ ಸಂಸ್ಥೆ ಟಾಪ್: ಕನ್ನಿಕಾ ಶಿಲ್ಪ ನವೋದಯ ತರಬೇತಿ ಸಂಸ್ಥೆಯಲ್ಲಿ ಮುಖ್ಯ ತರಬೇತಿದಾರರಾಗಿ ಸಾವಿರಾರು ಮಕ್ಕಳಿಗೆ ತರಬೇತಿ ನೀಡುತ್ತಾ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಕನ್ನಿಕಾ ಶ್ರಮಿಸುತ್ತಿದ್ದಾರೆ. ಸಂಸ್ಥೆಯಲ್ಲಿ ತರಬೇತಿ ಪಡೆದು ಉನ್ನತ ವ್ಯಾಸಂಗ ಮಾಡಿರುವ ಸಾಕಷ್ಟು ವಿದ್ಯಾರ್ಥಿಗಳು ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉತ್ತಮ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ 13 ಜನ ವಿಜ್ಞಾನಗಳಿದ್ದಾರೆ. ಮುಖ್ಯವಾಗಿ ಅವಕಾಶ ವಂಚಿತ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿರುವ ಹೆಗ್ಗಳಿಕೆ ಸಂಸ್ಥೆ ಹೊಂದಿದೆ. ನೂರಾರು ಅಂಗವಿಕಲ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರೊಂದಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುತ್ತಿದ್ದಾರೆ.

ಇದಲ್ಲದೆ, ಪ್ರತಿ ವರ್ಷ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತವಾಗಿ 2000ಕ್ಕೂ ಅಧಿಕ ಉಚಿತ ನೋಟ್‌ಬುಕ್ ವಿತರಣೆ, ಎಸ್‌ಎಸ್‌ಎಲ್ಸಿಯಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಅಂಕ ವೀರ ಪ್ರಶಸ್ತಿ ಪ್ರದಾನ, ವಿವಿಧ ಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವ್ಯಕ್ತಿತ್ವ ವಿಕಸನ ತರಬೇತಿ, ಸರ್ಕಾರಿ ಶಾಲೆಯಲ್ಲಿ ಓದಿ ವೈದ್ಯಕೀಯ ಪದವಿಯನ್ನು ಪಡೆಯಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುತ್ತಾರೆ.

ಅಂಚೆ ಕಾರ್ಡ್‌ನಲ್ಲಿ ಕನ್ನಡ ಎಂಬ ಪದವನ್ನು 2000 ಬಾರಿ ಬರೆದು(6000 ಅಕ್ಷರ) ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಲ್ಲದೆ 2020ರ ನವೋದಯ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಇವರಿಗೆ ಪ್ರಶಸ್ತಿ ನೀಡಿದೆ. ಕನ್ನಿಕಾ ಅವರ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಮುಡಿಗೇರಿವೆ. ಇನ್ನು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ’ಮುನ್ನಡೆ’, ’ಮೌನದಿಂದಿರಿ’,’ಸ್ನೇಹದ ಹಣತೆ’ ಎಂಬ ಕವನ ಸಂಕಲನ ರಚಿಸಿದ್ದಾರೆ. ಮಂಡ್ಯ ತಾಲೂಕು ಹದಿನಾರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿಕೊಂಡಿದ್ದರು.