ಮುಧೋಳ: ಮಹಾವಿದ್ಯಾಲಯಗಳಲ್ಲಿ ಇರಬೇಕಾದ ಎಲ್ಲ ಸೌಲಭ್ಯಗಳನ್ನು ಬಾಗಲಕೋಟೆ ಬಿವಿವಿ ಸಂಘದ ಮುಧೋಳದ ಎಸ್.ಆರ್.ಕಂಠಿ ಮಹಾವಿದ್ಯಾಲಯ ಹೊಂದಿದೆ. ಮಹಾವಿದ್ಯಾಲಯಕ್ಕೆ ಉತ್ತಮ ಗ್ರೇಡ್ ದೊರೆಯುವ ಸಾಧ್ಯತೆಗಳಿವೆ ಎಂದು ನ್ಯಾಕ್ ಪೀರ್ ತಂಡದ ಅಧ್ಯಕ್ಷೆ ರಾಜಸ್ಥಾನದ ಉದಯಪುರ ಮೋಹನಲಾಲ ಸುಖಾಧ್ಯಾಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸುನಿತಾ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದರು.
ಎರಡು ದಿನಗಳ ಕಾಲ ನ್ಯಾಕ್ ಪೀರ್ ತಂಡ ನಗರದ ಎಸ್.ಆರ್.ಕಂಠಿ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳು, ಶೈಕ್ಷಣಿಕ ಗುಣಮಟ್ಟ, ಅನುಭವಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ, ಕಾಲೇಜಿನ ವಾತಾವರಣ ಪರಿಶೀಲಿಸಿ ಹಿರಿಯ ವಿದ್ಯಾರ್ಥಿಗಳ ಸಂಬಂಧಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತು. ಪ್ರಾಚಾರ್ಯ ಪ್ರೊ.ಎಂ.ವಿ.ಜಿಗಬಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿ ವಿವಿಧ ವಿಭಾಗಗಳ ಮಾಹಿತಿ ಪಡೆಯಿತು. ನಿರ್ಗಮನ ಸಭೆಯಲ್ಲಿ ಪಾಲ್ಗೊಂಡು ಗೌಪ್ಯ ವರದಿ ಹಸ್ತಾಂತರಿಸಿದ ಬಳಿಕ ಮಾತನಾಡಿದ ಡಾ.ಸುನಿತಾ ಮಿಶ್ರಾ, ಸಂಸ್ಥೆಯಲ್ಲಿರುವ ಮೂಲ ಸೌಕರ್ಯ, ಸೌಲಭ್ಯಗಳು, ಹಸಿರು ಆವರಣ, ವಿದ್ಯಾರ್ಥಿಗಳ ಚುರುಕುತನ, ಹಳೆಯ ವಿದ್ಯಾರ್ಥಿಗಳ ಕೊಡುಗೆಗಳು ಮತ್ತು ಪ್ರಾಂಶುಪಾಲರು ಮತ್ತು ಸಿಬ್ಬಂದಿ ಕಾರ್ಯವೈಖರಿ ಶ್ಲಾಘನೀಯವಾದುದು ಎಂದರು.
ನ್ಯಾಕ್ ಪೀರ್ ತಂಡದಲ್ಲಿ ಗುಜರಾತ ರಾಜ್ಯದ ಭಾವನಾನಗರ ವಿಶ್ವವಿದ್ಯಾಲಯದ ಡಾ.ಕಿಶೋರ ಮಹೇಂದ್ರ ಜೋಶಿ, ಮಹಾರಾಷ್ಟ್ರದ ಅಮರಾವತಿಯ ಸಂತ ಗಾಡಗೆ ಬಾಬಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಮಹೇಂದ್ರ ಢೋರೆ ಇದ್ದರು.
ಸಂಸ್ಥೆಯ ಮುಖ್ಯ ಸಲಹೆಗಾರರಾದ ಡಾ.ಮೀನಾ ಚಂದಾವರಕರ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಸದಸ್ಯ ರವೀಂದ್ರ ಸಾವಳಗಿಮಠ, ಕಾಲೇಜುಗಳ ಪದನಿಮಿತ್ತ ಕಾರ್ಯದರ್ಶಿ ಡಾ.ಎಸ್.ಎನ್.ಗಾಂವಕರ, ನಿವತ್ತ ಪ್ರಾಚಾರ್ಯ ಪ್ರೊ.ಬಿ.ಆರ್.ಪಾಟೀಲ, ಐಕ್ಯೂಎಸಿ ಸಂಯೋಜಕಿ ಪ್ರೊ.ಎಸ್.ಎಸ್.ಬಿರಾದಾರ ಅವರು ನಿರ್ಗಮನ ಸಭೆಯಲ್ಲಿದ್ದರು.