ಜಿಲ್ಲೆ

ಕಂದಾಯ ವ್ಯಾಜ್ಯಕ್ಕೆ ಶೀಘ್ರ ಪರಿಹಾರ

ಮೈಸೂರು: ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಕಂದಾಯ ವ್ಯಾಜ್ಯ ಪರಿಹರಿಸುವತ್ತ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಿದ್ದು, ಜಿಲ್ಲೆಯಲ್ಲಿ ಶೇ.87 ರಷ್ಟು ಪ್ರಗತಿ ಸಾಧಿಸಲಾಗಿದ್ದು, ಜಿಲ್ಲಾಡಳಿತದ ಕ್ರಮದಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕಂದಾಯ ವ್ಯಾಜ್ಯದಿಂದಾಗಿ ಗ್ರಾಮಗಳಲ್ಲಿ ಹಲವಾರು ಕಲಹಗಳು ಸಂಭವಿಸಿ ಜನರಲ್ಲಿ ವೈಮನಸ್ಸು ಉಂಟಾಗುತಿತ್ತು. ಆಸ್ತಿ ಭಾಗ, ಖಾತೆ ಬದಲಾವಣೆ, ಸರ್ವೇ ವಿಚಾರ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಸಾಕಷ್ಟು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳು ಶೀಘ್ರ ವಿಲೇವಾರಿಯಾಗದೆ ಜನರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದರು. ಜನರು ಎದುರಿಸುತ್ತಿದ್ದ ಬಹುಮುಖ್ಯವಾದ ಕಂದಾಯ ವ್ಯಾಜ್ಯ ಸಮಸ್ಯೆಗೆ ಜಿಲ್ಲಾಡಳಿತ ಇದೀಗ ಇತಿಶ್ರೀ ಹಾಡಲು ಪ್ರಾರಂಭಿಸಿದೆ.

ಕಾಲಮಿತಿಯೊಳಗೆ ಪೂರ್ಣ: ಕಂದಾಯ ವ್ಯಾಜ್ಯದಿಂದ ರೈತರು ಎದುರಿಸುತ್ತಿರುವ ಸಮಸ್ಯೆಯ ಕುರಿತು ವಿವಿಧ ರೈತ ಸಂಘಟನೆಗಳು ಸರ್ಕಾರದ ಗಮನ ಸೆಳೆಯುತ್ತಲೇ ಇದ್ದರು. ಸರಿಯಾದ ಸಮಯಕ್ಕೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಕಲಾಪ ನಡೆಯದೆ ವ್ಯಾಜ್ಯ ವಿಲೇವಾರಿ ವಿಳಂಬವಾಗುತಿತ್ತು. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಕೂಡಲೇ ನಿಗದಿತ ಕಾಲಮಿತಿಯೊಳಗೆ ವ್ಯಾಜ್ಯಗಳನ್ನು ಪಹರಿಸುವಂತೆ ಸ್ಪಷ್ಟ ನಿರ್ದೇಶನ ನೀಡಿತ್ತು. ಇದರ ಪರಿಣಾಮ ಜಿಲ್ಲೆಯಲ್ಲಿ ಕಂದಾಯ ವ್ಯಾಜ್ಯ ವಿಲೇವಾರಿ ಚುರುಕುಗೊಂಡಿದೆ.

ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಮೈಸೂರು ಮತ್ತು ಹುಣಸೂರು ಉಪ ವಿಭಾಗಾಧಿಕಾರಿ, ವಿಶೇಷ ಉಪ ವಿಶೇಷಾಧಿಕಾರಿ ಹಾಗೂ 9 ತಾಲೂಕುಗಳ ತಹಶೀಲ್ದಾರ್‌ಗಳ ನ್ಯಾಯಾಲಯದಲ್ಲಿ ಜಿಲ್ಲೆಯಲ್ಲಿ 14,109 ಪ್ರಕರಣಗಳು ದಾಖಲಾಗಿತ್ತು. ಕೆಲಸದ ಒತ್ತಡ ಹಾಗೂ ವಿವಿಧ ಕಾರಣಗಳಿಂದ ಈ ಪ್ರಕರಣಗಳು ವಿಲೇವಾರಿ ವಿಳಂಬವಾಗಿತ್ತು. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಹಳೆಯ ಪ್ರಕರಣಗಳನ್ನು ತ್ವರಿತ ವಿಲೇವಾರಿ ಮಾಡಲು ಹೆಚ್ಚಿನ ಆಸಕ್ತಿ ತೋರಿದ ಪರಿಣಾಮ ಇದೀಗ ಪ್ರಕರಣಗಳು ಶೀಘ್ರ ವಿಲೇವಾರಿಯಾಗುತ್ತಿದ್ದು, ಜನರ ಹಣ ಹಾಗೂ ಸಮಯ ಉಳಿತಾಯವಾಗುತ್ತಿದೆ.

ಕಂದಾಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯಗಳಲ್ಲಿ ವ್ಯಾಜ್ಯ ಹೂಡುವ ಮೊದಲು ತಹಶೀಲ್ದಾರ್ ನ್ಯಾಯಾಲಯಕ್ಕೆ ವ್ಯಾಜ್ಯ ಬರುತ್ತದೆ. ತಹಶೀಲ್ದಾರ್ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನೀಡುವ ತೀರ್ಪು ತೃಪ್ತಿರಕವಾಗಿಲ್ಲದೆ ಹೋದರೆ ಅರ್ಜಿದಾರರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಅವಕಾಶವಿದೆ.

ಎಲ್ಲಿ ಎಷ್ಟು ಪ್ರಕರಣ?: ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ 2161 ಪ್ರಕರಣ ದಾಖಲಾಗಿತ್ತು. ಈ ಪೈಕಿ 1463 ಪ್ರಕರಣಗಳು ಇತ್ಯರ್ಥಗೊಂಡಿದ್ದು, 698 ಪ್ರಕರಣಗಳು ಮಾತ್ರ ಇದೀಗ ವಿಲೇವಾರಿಗೆ ಬಾಕಿ ಇದೆ. ಅದೇ ರೀತಿ ಅಪರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ 248 ಪ್ರಕರಣದಲ್ಲಿ 201 ಇತ್ಯರ್ಥವಾಗಿದ್ದು, 47 ವಿಲೇವಾರಿಗೆ ಬಾಕಿ ಇದೆ. ಹುಣಸೂರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 1692 ಪ್ರಕರಣಗಳಲ್ಲಿ 1428 ಇತ್ಯರ್ಥಗೊಂಡಿದ್ದು, 264 ಪ್ರಕರಣ ವಿಲೇವಾರಿ ಆಗಬೇಕಾಗಿದೆ. ಮೈಸೂರು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 2014 ಪ್ರಕರಣಗಳಲ್ಲಿ 2769 ಇತ್ಯರ್ಥಗೊಂಡಿದ್ದು, 245 ವಿಲೇವಾರಿ ಮಾಡಬೇಕಾಗಿದೆ. ಮೈಸೂರು ವಿಶೇಷ ನ್ಯಾಯಾಲಯದಲ್ಲಿ 503 ಪ್ರಕರಣಗಳಲ್ಲಿ 81 ಇತ್ಯರ್ಥವಾಗಿದ್ದು, 178 ವಿಲೇವಾರಿ ಆಗಬೇಕಾಗಿದೆ. ಹುಣಸೂರು ವಿಶೇಷ ನ್ಯಾಯಾಲದಲ್ಲಿ 201 ಪ್ರಕರಣಗಳಲ್ಲಿ 81 ವಿಲೇವಾರಿಯಾಗಿದ್ದು, 120 ವಿಲೇವಾರಿಗೆ ಬಾಕಿ ಇದೆ.

ಎಚ್.ಡಿ.ಕೋಟೆ ತಹಶೀಲ್ದಾರ್ ನ್ಯಾಯಾಲಯದಲ್ಲಿ 461 ಪ್ರಕರಣಗಳಲ್ಲಿ 413 ಇರ್ತ್ಯವಾಗಿದ್ದು, 48 ಬಾಕಿ ಇದೆ. ಹುಣಸೂರಿನಲ್ಲಿ 904 ಪ್ರಕರಣಗಳಲ್ಲಿ 868 ಇತ್ಯರ್ಥವಾಗಿ 36 ವಿಲೇವಾರಿಗೆ ಬಾಕಿ ಉಳಿದಿದೆ. ಕೆ.ಆರ್. ನಗರ ತಾಲೂಕಿನಲ್ಲಿ 218 ಪ್ರಕರಣಗಳಲ್ಲಿ 208 ಇತ್ಯರ್ಥವಾಗಿ 10 ಪ್ರಕರಣಗಳು ಮಾತ್ರ ಬಾಕಿ ಉಳಿದಿದೆ. ಮೈಸೂರು ತಾಲೂಕಿನಲ್ಲಿ 2678 ಪ್ರಕರಣಗಳಲ್ಲಿ 2559 ಪ್ರಕರಣ ಇತ್ಯರ್ಥ ಮಾಡಲಾಗಿದ್ದು, 119 ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ನಂಜನಗೂಡು ತಾಲೂಕಿನಲ್ಲಿ 1281 ಪ್ರಕರಣಗಳಲ್ಲಿ 1889 ಪ್ರಕರಣ ಇತ್ಯರ್ಥಪಡಿಸಲಾಗಿದ್ದು, 92 ಬಾಕಿ ಇವೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 545 ಪ್ರಕರಣಗಳಲ್ಲಿ 498 ಇತ್ಯರ್ಥವಾಗಿದ್ದು, 47 ಉಳಿದುಕೊಂಡಿವೆ. ಸಾಲಿಗ್ರಾಮ ತಾಲೂಕಿನಲ್ಲಿ 524 ಪ್ರಕರಣಗಳಲ್ಲಿ 495 ಇರ್ತ್ಯರ್ಥವಾಗಿ 29 ಇತ್ಯರ್ಥಕ್ಕೆ ಬಾಕಿ ಇದೆ. ಸರಗೂರು ತಾಲೂಕಿನಲ್ಲಿ 145 ಪ್ರಕರಣಗಳಲ್ಲಿ 129 ಇತ್ಯರ್ಥ ಪಡಿಸಲಾಗಿದ್ದು, 29 ಇತ್ಯರ್ಥಕ್ಕೆ ಬಾಕಿ ಇದೆ. ತಿ.ನರಸೀಪುರ ತಾಲೂಕಿನಲ್ಲಿ 1560 ಪ್ರಕರಣಗಳಲ್ಲಿ 1483 ಇತ್ಯರ್ಥ ಪಡಿಸಲಾಗಿದ್ದು, 77 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿದೆ.

ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಕಂದಾಯ ವ್ಯಾಜ್ಯವನ್ನು ಪರಿಹರಿಸಲು ಹೆಚ್ಚಿನ ಗಮನ ಹರಿಸಲಾಗಿದೆ. ಇದರ ಪರಿಣಾಮ ಕಳೆದ ಒಂದೂವರೆ ವರ್ಷದಲ್ಲಿ ಎಲ್ಲ ಹಂತದ ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಸಾಕಷ್ಟು ಇತ್ಯರ್ಥವಾಗಿದ್ದು, ಇದರಿಂದ ರೈತಾಪಿ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಿದೆ.

ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ