ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ವಸ್ತಿಯಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಮಗುವಿನ ರಕ್ಷಣೆಗೆ ಮುಂದಾಗಿರುವ ಗ್ರಾಮಸ್ಥರು. 
ಜಿಲ್ಲೆ

ಆಟವಾಡಲು ಹೋಗಿ ಕೊಳವೆ ಬಾವಿಗೆ ಬಿದ್ದ ಕಂದಮ್ಮ, ಭೀಮಾತೀರದಲ್ಲಿ ಹೃದಯ ವಿದ್ರಾವಕ ಘಟನೆ !!!

ವಿಜಯಪುರ: ಆಟವಾಡಲು ಹೋಗಿದ್ದ ಒಂದೂವರೆ ವರ್ಷದ ಮುಗ್ದ ಕಂದ ಕೊಳವೆ ಬಾವಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಭೀಮಾತೀರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಗು ಇನ್ನೂ ಜೀವಂತವಾಗಿದೆ.

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನೊಂದರಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ. ಸತೀಶ ಮುಜುಗೊಂಡ ಎಂಬುವರ ಕಂದ ಸಾತ್ವಿಕ ಕೊಳವೆ ಬಾವಿಗೆ ಬಿದ್ದಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಕಳೆದ ಎರಡ್ಮೂರು ದಿನಗಳ ಹಿಂದಷ್ಟೇ ಸತೀಶ ಅವರು ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿದ್ದರು. ಕೊಳವೆ ಬಾವಿ ಆಳ 15-20 ಅಡಿಯಷ್ಟೇ ಇದೆ. ಸಂಜೆ ಬೇರೊಂದು ಕಡೆ ಮೋಟರ್ ಬಿಡುವ ಕಾರ್ಯದಲ್ಲಿ ಕುಟುಂಬಸ್ಥರು ತಲ್ಲೀನರಾಗಿದ್ದರು. ಮಗು ಆಟವಾಡಲು ಹೋಗಿ ಕೊಳೆವೆಬಾವಿಗೆ ಬಿದ್ದಿದೆ. ಬಹಳ ಹೊತ್ತು ಮಗು ಕಾಣಿಸಿಲ್ಲ. ಹೀಗಾಗಿ ಕೂಡಲೇ ಕೊಳವೆ ಬಾವಿಯತ್ತ ನೋಡಲಾಗಿ ಮಗುವಿನ ಅಳು ಕೇಳಿಸಿದೆ. ಆಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೂಡಲೇ ವಿಷಯ ಗ್ರಾಮದೆಲ್ಲೆಡೆ ಹರಡಿದ್ದು, ಜೆಸಿಬಿ ಸಹಾಯದಿಂದ ಕೊಳವೆ ಬಾವಿ ಅಗೆದು ಮಗುವನ್ನು ರಕ್ಷಿಸುವ ಪ್ರಯತ್ನ ನಡೆದಿತ್ತು. ಆದರೆ, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುತ್ತಿರುವ ವಿಷಯ ಅರಿತು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಇಂಡಿ ತಾಲೂಕು ಕೇಂದ್ರದಿಂದ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗೆ ದೌಡಾಯಿಸಿದ್ದಾರೆ.