ಹಾನಗಲ್ಲ: ತಾಲೂಕಿನ ಕಂಚಿನೆಗಳೂರ ಗ್ರಾಮದ 4ನೇ ವಾರ್ಡ್ನಲ್ಲಿರುವ 25ಕ್ಕೂ ಹೆಚ್ಚು ಮನೆಗಳಿಗೆ ಕೆರೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಧರ್ಮಾ ಕಾಲುವೆ ನೀರು ಕೆರೆಗೆ ಸೇರುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಗ್ರಾಮದಲ್ಲಿರುವ ಉರ್ದು ಪ್ರಾಥಮಿಕ ಶಾಲೆಯೂ ಜಲಾವೃತಗೊಂಡಿದೆ. ಈಗಾಗಲೇ ಎರಡು ಮನೆಗಳು ಕುಸಿದಿದ್ದು, ಇನ್ನಷ್ಟು ಮನೆಗಳು ಬೀಳುವ ಹಂತದಲ್ಲಿವೆ. ಹೀಗಾಗಿ ಗ್ರಾಮಸ್ಥರು ಗ್ರಾಮ ತೊರೆದು ಸಂಬಂಧಿಕರ ಊರುಗಳಿಗೆ ತೆರಳುತ್ತಿದ್ದಾರೆ. ತಹಸೀಲ್ದಾರ್ ಎಸ್. ರೇಣುಕಾ ಅವರು ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನ ಹೇರೂರ ಗ್ರಾಮದಲ್ಲಿ ಅಪ್ಪರ್ ತುಂಗಾ ಯೋಜನೆಯ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಫಸಲು ಹಾನಿಗೀಡಾಗಿದೆ. ನೀರಿನ ಹರಿವು ಹೆಚ್ಚಾಗಿ ಭತ್ತ ಹಾಗೂ ಮೆಕ್ಕೆಜೋಳ ಬೆಳೆಗಳು ಹಾನಿಯಾಗಿವೆ. ಕಳೆದ ವರ್ಷದ ಅನಾವೃಷ್ಟಿ ಆಥಿರ್ಕ ಪೆಟ್ಟು ಕೊಟ್ಟಿತ್ತು. ಈ ಬಾರಿ ಅತಿವೃಷ್ಟಿಯಿಂದಾಗಿ ಬೆಳೆ ಬಾರದಂತಾಗಿದೆ.
ಕಿರವಾಡಿ&ತಿಳವಳ್ಳಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ವರದಾ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಇದಲ್ಲದೆ, ಕಿರವಾಡಿ&ಯತ್ತಿನಹಳ್ಳಿ ರಸ್ತೆಯಲ್ಲಿಯೂ ಹಿರೇಕೆರೂರ ತಾಲೂಕಿನ ಹಳ್ಳ ತುಂಬಿ ಹರಿಯುತ್ತಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ನೀರಿನಲ್ಲಿಯೇ ವಾಹನ ಸವಾರರು ಹಾಗೂ ಬಸ್ಗಳು ಸಂಚರಿಸುತ್ತಿವೆ. ತಾಲೂಕಿನ ಮಕರವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣ ಗೋಡೆ ಅಧಿಕ ಮಳೆಯಿಂದಾಗಿ ನೆಲಕ್ಕುರುಳಿದೆ.
ತಾಲೂಕಿನ ಹಾವಣಗಿ ಗ್ರಾಮದಲ್ಲಿ 105 ಮಿಮೀ, ಆಡೂರು ಗ್ರಾಮದಲ್ಲಿ 100 ಮಿಮೀ ಮಳೆಯಾಗಿರುವುದು ದಾಖಲಾಗಿದೆ. ತಾಲೂಕಿನಾದ್ಯಂತ ಇದೇ ಸ್ಥಿತಿಯಿದೆ. ಸೋಮವಾರವೂ ಕೂಡ ಗುಡುಗು&ಸಿಡಿಲು ಸಹಿತ ಮಳೆ ಮುದುವರಿದಿದ್ದು ಆತಂಕ ಸೃಷ್ಟಿಸಿದೆ. ಇಂಥ ಸಂದರ್ಭದಲ್ಲಿ ರೈತರು ಜಾಗೃತೆ ವಹಿಸಬೇಕು. ಮಳೆಯಿಂದಾಗುವ ಸಮಸ್ಯೆಗಳನ್ನು ಎದುರಿಸಲು ತಾಲೂಕಾಡಳಿತ ಎಲ್ಲ ವ್ಯವಸ್ಥೆ ಕೈಗೊಳ್ಳುತ್ತಿದೆ. ಎಸ್. ರೇಣುಕಾ ತಹಸೀಲ್ದಾರ್, ಹಾನಗಲ್ಲ