ಜಿಲ್ಲೆ

ಸಂಗೀತಗಾರರಿಗೆ ಕನವಳ್ಳಿ ಬದುಕು ಪ್ರೇರಕ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರೊ. ಸದಾನಂದ ಕನವಳ್ಳಿ ಅವರದ್ದು ಬಹುಮುಖ ವ್ಯಕ್ತಿತ್ವ. ಸಂಗೀತ ಕ್ಷೇತ್ರ ಶ್ರೀಮಂತಗೊಳಿಸಿದ ದಿವ್ಯಚೇತನ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಪಂ. ಎಂ. ವೆಂಕಟೇಶಕುಮಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸದಾನಂದ ಕನವಳ್ಳಿ ಸ್ಮರಣಾರ್ಥ ಸೋಮವಾರ ಸಂಘದಲ್ಲಿ ಆಯೋಜಿಸಿದ್ದ ದತ್ತಿ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನವಳ್ಳಿ ಅವರು ಸಂಗೀತದ ಬಗ್ಗೆ ಇರುವಷ್ಟು ಕಳಕಳಿ ಹಾಗೂ ಆಸಕ್ತಿ ಅತಿ ಹೆಚ್ಚು ಹೊಂದಿದ್ದರು. ಸಾಹಿತ್ಯ, ಸಂಸ್ಕೃತಿ, ಸಂಗೀತ, ಹೀಗೆ ಹಲವು ವಿಷಯಗಳಲ್ಲಿ ವಿದ್ವತ್‌ಪೂರ್ಣ ಜ್ಞಾನ ಹೊಂದಿದ್ದರು. ಸ್ವಹಿತಕ್ಕಿಂತ ಪರರ ಹಿತಕ್ಕಾಗಿ ಜೀವನದುದ್ದಕ್ಕೂ ದುಡಿದವರು. ಸಂಗೀತಗಾರರಿಗೆ ಅವರ ಬದುಕು ಪ್ರೇರಕಶಕ್ತಿಯಾಗಿದೆ ಎಂದರು.
ಶಿರೀಷ ಜೋಶಿ ಮಾತನಾಡಿ, ಕನವಳ್ಳಿಯವರು ಸಂಗೀತ ಕ್ಷೇತ್ರದಲ್ಲಿ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ಸಂಗೀತ ಕುರಿತು ಅವರಂತೆ ಕರಾರುವಕ್ಕಾಗಿ ಮಾತನಾಡುವವರು ಮತ್ತೊಬ್ಬರಿಲ್ಲ. ದೇಶದ ಸಂಗೀತ ಪ್ರಕಾರಗಳ ಬಗ್ಗೆ ಮತ್ತು ಸಂಗೀತಗಾರರ ಬಗ್ಗೆ ಅಗಾಧ ಅಧ್ಯಯನ ಮಾಡಿದ್ದರು ಎಂದರು.
ಬೆಳಗಾವಿಯ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಸರಿತಾ ಮಹೇಶ ಸಂಗೀತ ಪ್ರಸ್ತುತಪಡಿಸಿದರು. ಅಲ್ಲಮಪ್ರಭು ಕಡಕೋಳ ತಬಲಾ ಮತ್ತು ವಿನೋದ ಪಾಟೀಲ ಹಾರ್ಮೋನಿಯಂ ಸಾಥ್ ನೀಡಿದರು.
ಚಂದ್ರಕಾಂತ ಬೆಲ್ಲದ, ವಿರೇಶ ಕನವಳ್ಳಿ, ಬಸವಪ್ರಭು ಹೊಸಕೇರಿ, ಸದಾನಂದ ಶಿವಳ್ಳಿ, ಕೆ.ಎಚ್. ನಾಯಕ, ಸಿ.ಬಿ. ಕನವಳ್ಳಿ, ಡಾ. ಎಂ.ವಿ. ಕನವಳ್ಳಿ, ರಾಘವೇಂದ್ರ ಆಯಿ, ಅರ್ಜುನ ವಠಾರ, ಹೇಮಂತ ಲಮಾಣಿ, ಶಿವಾನಂದ ಹೂಗಾರ, ಇತರರು ಇದ್ದರು.
ಗುರು ಹಿರೇಮಠ ಸ್ವಾಗತಿಸಿದರು. ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.