ಜಿಲ್ಲೆ

ಕೃಷಿ ಸಂಶೋಧನೆ ಜಮೀನು ಆಸ್ಪತ್ರೆಗೆ ಬೇಡ: ಕರ್ನಾಟಕ ನವ ನಿರ್ಮಾಣ ಸೇನೆ ಕಿಡಿ

ಕಲಬುರಗಿ: ಜಿಲ್ಲೆಯ ರೈತರ ಕೃಷಿ ವಿಶೇಷವಾಗಿ ತೊಗರಿ ಸಂಶೋಧನೆ, ಹೊಸ ತಳಿ ಆವಿಷ್ಕಾರದ ಮಹತ್ವದ ಕೇಂದ್ರವಾದ ಕೃಷಿ ವಿಜ್ಞಾನ ಕೇಂದ್ರದ 12 ಎಕರೆ ಜಮೀನನ್ನು ಅಜೀಂ ಪ್ರೇಮಜಿ ಫೌಂಡೇಶನ್ ಗೆ ನೀಡಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರ ಖಂಡಿಸಿ, ಕೂಡಲೇ ನಿರ್ಧಾರ ವಾಪಸ್ ಪಡೆಯಲು ಆಗ್ರಹಿಸಿ ನಗರದಲ್ಲಿ ಬುಧವಾರ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಅನ್ನಪೂರ್ಣ ವೃತ್ತದಿಂದ ಜಗತ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತದ ನಿರ್ಧಾರವನ್ನು ಖಂಡಿಸಿದರು.

ಸಂಶೋಧನಾ ಕೇಂದ್ರದ ಜಮೀನನ್ನು ಆಸ್ಪತ್ರೆ ನಿರ್ಮಾಣಕ್ಕೆ ಹಸ್ತಾಂತರಿಸುವುದನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿದರು.

ಆಸ್ಪತ್ರೆ ನಿರ್ಮಾಣ ಹಾಗೂ ಆರೋಗ್ಯ ಸೇವೆಯ ಅಭಿವೃದ್ಧಿ ಖಂಡಿತವಾಗಿಯೂ ಸ್ವಾಗತಾರ್ಹ. ಆದರೆ,ಅದಕ್ಕಾಗಿ ದಶಕಗಳಿಂದ ಕೃಷಿ ಸಂಶೋಧನೆ ಮತ್ತು ಬೀಜೋತ್ಪಾದನೆಗೆ ಬಳಕೆಯಾಗುತ್ತಿರುವ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದು "ಅನ್ನ ನೀಡುವ ಜಮೀನಿಗೆ ಜಿಲ್ಲಾಡಳಿತ ನೀಡುತ್ತಿರುವ ಕೊಡಲಿ ಪೆಟ್ಟು ಇದಾಗಿದ್ದು,ಇದನ್ನು ಈ ಕೂಡಲೇ ಕೈ ಬಿಡುವಂತೆ ನಾವು ಆಗ್ರಹಿಸಿದರು.

ಐಸಿಎಆರ್ (ICAR) ನಿಯಮಾವಳಿಗಳ ಪ್ರಕಾರ, ಪ್ರಾಯೋಜಿತ ಕೃಷಿ ಯೋಜನೆಗಳಿಗೆ ಮೀಸಲಾದ ಜಮೀನನ್ನು ಇತರ ಉದ್ದೇಶಗಳಿಗೆ ವರ್ಗಾಯಿಸಲು ಸರ್ಕಾರ, ಜಿಲ್ಲಾಡಳಿತಕ್ಕೆ ಅವಕಾಶವಿಲ್ಲ. ಮಹಾವಿದ್ಯಾಲಯದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಹಾಗೂ ಸಾವಿರಾರು ರೈತರ ತರಬೇತಿಗೆ ಈ ಕೇಂದ್ರವು ಕೇಂದ್ರಬಿಂದುವಾಗಿದೆ.

ಜಿಲ್ಲಾಡಳಿತ ಹಾಗೂ ಸರ್ಕಾರವು ತಕ್ಷಣವೇ ಈ ಪ್ರಸ್ತಾವನೆಯನ್ನು ಕೈಬಿಟ್ಟು, ರೈತರ ಮತ್ತು ಕೃಷಿ ಕ್ಷೇತ್ರ ಹಿತವನ್ನು ಕಾಯಬೇಕೆಂದು ಈ ಮೂಲಕ ಆಗ್ರಹಿಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಪ್ರಶಾಂತ ಮಠಪತಿ, ಸಂತೋಷ ಪಾಟೀಲ್, ವಿಕಾಸ ಚವ್ಹಾಣ್, ರೈತರಾದ ಮಲ್ಲಿನಾಥ ಕೊಳ್ಳೂರ, ಆದಿನಾಥ ಹೀರಾ, ಋಶಿ ಬೆನಕನಳ್ಳಿ, ಸಂತೋಷ ಕೆರೂರ, ಭೀಮಾಶಂಕರ ಕೊರವಿ, ಮಡಿವಾಳ ಲಿಂಬಿತೋಟ, ಮಲ್ಲಿಕಾರ್ಜುನ ಜಮಾದಾರ, ಈಶ್ವರ ಹೇರೂರ, ಜಗದೀಶ ಜಮಾದಾರ, ಮಂಜು ಕಡಗಂಚಿ ಸೇರಿದಂತೆ ನೂರಾರು ಜನರು, ರೈತರು ಉಪಸ್ಥಿತರಿದ್ದರು.

--------

ಸರ್ಕಾರ ಹಾಗೂ ಜಿಲ್ಲಾಡಳಿತವು ಕೃಷಿ ಭೂಮಿಯನ್ನು ಬಿಟ್ಟು,ಆಸ್ಪತ್ರೆ ನಿರ್ಮಾಣಕ್ಕೆ ನಗರದ ಪರ್ಯಾಯ ಜಾಗಗಳನ್ನು ಬಳಸಿಕೊಳ್ಳಬೇಕು.ಆಸ್ಪತ್ರೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ,ಆದರೆ ಕೃಷಿ ಸಂಶೋಧನಾ ಕೇಂದ್ರದ ಜಮೀನನ್ನು ಹಸ್ತಾಂತರಿಸುವುದಕ್ಕೆ ಸಂಪೂರ್ಣ ವಿರೋಧವಿದೆ.

! ರವಿ ದೇಗಾಂವ, ಜಿಲ್ಲಾಧ್ಯಕ್ಷ

ಕರ್ನಾಟಕ ನವ ನಿರ್ಮಾಣ ಸೇನೆ

-----

ದೇಶಕ್ಕೆ 11 ಶ್ರೇಷ್ಠ ತೊಗರಿ ತಳಿಗಳನ್ನು ಕೊಡುಗೆಯಾಗಿ ನೀಡಿದ ಹಾಗೂ ನೂರಾರು ಕೃಷಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರ (KVK) ಹಾಗೂ ಕೃಷಿ ಸಂಶೋಧನಾ ಕೇಂದ್ರದ ಜಮೀನನ್ನು ಬೇರೆ ಉದ್ದೇಶಕ್ಕೆ ನೀಡುವ ನಿರ್ಧಾರ ತಕ್ಷಣ ಕೈಬಿಡಬೇಕು.

! ಮಲ್ಲಿನಾಥ ಕೊಳ್ಳೂರ,

ಪ್ರಗತಿಪರ ರೈತ