ವಿಜಯವಾಣಿ ಸುದ್ದಿಜಾಲ ಕನಕಪುರ
ಪಕ್ಷದೊಳಗಿನ ಬೆಳವಣಿಗೆಗಳಿಂದ ಬೇಸತ್ತು ಇತ್ತೀಚೆಗೆ ರಾಜಕೀಯ ತಟಸ್ಥ ನಿಲುವು ಹೊಂದಿದ್ದ ಜೆಡಿಎಸ್ ಮುಖಂಡ ಡಿ.ಎಂ.ವಿಶ್ವನಾಥ್, ಕಾರ್ಯಕರ್ತರು ಹಾಗೂ ಮುಖಂಡರ ಒತ್ತಡದ ಮೇರೆಗೆ ಮೌನಮುರಿದು ಸ್ವಾಭಿಮಾನಿ ಸಮಾವೇಶದಲ್ಲಿ ಭಾಗಿಯಾಗಿ ರಾಜಕೀಯ ವಲಯದಲ್ಲಿ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದರು.
ನಗರದ ಎಸ್.ಬಿ.ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಸ್ವಾಭಿಮಾನ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ವರ್ಷಗಳಿಂದ ರಾಜಕೀಯದಲ್ಲಿ ತಟಸ್ಥನಾಗಿದ್ದುದು ಸತ್ಯ. ಎಲ್ಲರ ಒತ್ತಾಯದ ಮೇರೆಗೆ ನಾನು ಮತ್ತೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ಜನವರಿಯಲ್ಲಿ ಜೆಡಿಎಸ್ ಕಚೇರಿ ತೆರೆದು ನಿರಂತರವಾಗಿ ಸಂಪರ್ಕದಲ್ಲಿದ್ದು ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ವಿರುದ್ಧದ ಸುಳ್ಳುಸುದ್ದಿಗಳಿಗೆ ಮಹತ್ವ ನೀಡಿ ನನ್ನನ್ನು ಕಡೆಗಣಿಸಿದ್ದರಿಂದ ಬೇಸರಗೊಂಡು ತಟಸ್ಥನಾಗಿದ್ದೆ. ಪಕ್ಷ ಹಾಗೂ ನನ್ನ ನಾಯಕತ್ವವನ್ನು ನಂಬಿದ್ದ ಅಭಿಮಾನಿಗಳು ಪಕ್ಷ ಸಂಘಟನೆಗೆ ಮುಂದಾಗುವಂತೆ ಹಲವು ಬಾರಿ ಒತ್ತಡ ಹೇರಿದ್ದರು. ಅದರಿಂದ ನಾನು ಸಮಾವೇಶ ಆಯೋಜಿಸಬೇಕಾಯಿತು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಟಸ್ಥರಾಗದಂತೆ ಸಭೆಯಲ್ಲಿ ತಿಳಿಸಿದ್ದಾರೆ. ಇವರುಗಳ ಮನವಿಗೆ ಓಗೊಟ್ಟು ಪಕ್ಷ ಮುನ್ನಡೆಸುವುದಾಗಿ ಭರವಸೆ ನೀಡಿದರು.
ಬಮುಲ್ ಮಾಜಿ ಅಧ್ಯಕ್ಷ ಕೆ.ಎಸ್.ಸುಧಾಕರ್ ಮಾತನಾಡಿ, ರಾಜಕೀಯ ನಿಂತ ನೀರಾಗಕೂಡದು. ರಾಜಕೀಯದಲ್ಲಿ ಇರುವವರಿಗೆ ಟೀಕೆ-ಟಿಪ್ಪಣಿಗಳು ಸಾಮಾನ್ಯ. ಎಲ್ಲವನ್ನೂ ಎದುರಿಸಿ ಧೈರ್ಯದಿಂದ ಮುನ್ನಡೆದಾಗ ಯಶಸ್ಸು ಲಭಿಸುತ್ತದೆ. ಡಿ.ಎಂ.ವಿಶ್ವನಾಥ್ ಧೃತಿಗೆಡದೆ ಯಾವುದೇ ಆತುರದ ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ ಪಕ್ಷ ಸಂಘಟಿಸುವಂತೆ ತಿಳಿಸಿದರು.
ರಾಜ್ಯ ಜೆಡಿಎಸ್ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನಮ್ಮ ಪಕ್ಷದ ಸರ್ವೋಚ್ಛ ನಾಯಕರು. ತಾಲೂಕು ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ನಾಯಕತ್ವದ ಬಗ್ಗೆ ಗೊಂದಲ ಇರುವುದು ದಿಟ. ಡಿ.ಎಂ.ವಿಶ್ವನಾಥ್ ಹಾಗೂ ಪಕ್ಷದ ವರಿಷ್ಠರ ನಡುವೆ ನೇರವಾಗಿ ಮಾತುಕತೆ ಮಾಡುವುದರ ಮೂಲಕ ಇರುವ ಗೊಂದಲ ಬಗೆಹರಿಸಿಕೊಳ್ಳಬೇಕು ಎಂಬುದು ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರ ಅಭಿಪ್ರಾಯವಾಗಿದೆ. ವಿಶ್ವನಾಥ್ ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳದೆ ಪಕ್ಷದ ಒಳಿತಿಗಾಗಿ ಮುನ್ನಡೆಯುವಂತೆ ಮನವಿ ಮಾಡಿದರು.
ಜೆಡಿಎಸ್‌ನ ಹಿರಿಯ ಮುಖಂಡ ಸಿದ್ದಪ್ಪಾಜಿ ಮಾತನಾಡಿ, ಪಕ್ಷದ ವರಿಷ್ಠರು ಕ್ಷುಲ್ಲಕ ವಿಚಾರಗಳಿಗೆ ಮಹತ್ವ ನೀಡುತ್ತಿರುವುದರಿಂದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಪಕ್ಷದಿಂದ ದೂರ ಉಳಿಯುತ್ತಿದ್ದಾರೆ. ಇನ್ನು ಮುಂದಾದರೂ ವರಿಷ್ಠರು ಸ್ಥಳೀಯ ಕಾರ್ಯಕರ್ತ ಮುಖಂಡರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ಪಕ್ಷ ಉಳಿಸುವಂತೆ ಮನವಿ ಮಾಡಿದರು.
ನಗರಸಭೆ ಸದಸ್ಯರಾದ ಬೇಕರಿ ನಾಗರಾಜು, ಸ್ಟುಡಿಯೋ ಚಂದ್ರು, ಮುಖಂಡರಾದ ಬಿ.ಎಸ್.ಗೌಡ, ಫಿಲ್ಟರ್ ಮಹದೇವ, ಪ್ರಮೀಳಮ್ಮ, ಮುಳ್ಳಹಳ್ಳಿ ಮಹೇಶ್, ಅರಳಾಳು ರಾಜೇಂದ್ರ ಇದ್ದರು.
ಜಿಲ್ಲಾಧ್ಯಕ್ಷರಿಗೆ ಕ್ಯಾರೆ ಎನ್ನಲಿಲ್ಲ
ಡಿ.ಎಂ.ವಿಶ್ವನಾಥ್ ನಡೆಸುತ್ತಿರುವ ಸಮಾವೇಶಕ್ಕೆ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜು ಕಾರ್ಯಕರ್ತರು, ಮುಖಂಡರು ಭಾಗವಹಿಸದಂತೆ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರೂ ಸಹ ಇಂದಿನ ಸಭೆಯಲ್ಲಿ ಎರಡು ಮತ್ತು ಮೂರನೇ ಸಾಲಿನ ಜೆಡಿಎಸ್ ಮುಖಂಡರು ಪ್ರಮುಖ ಸಾಲಿನಲ್ಲಿ ಕುಳಿತುಕೊಳ್ಳುವ ಮೂಲಕ ಜಿಲ್ಲಾಧ್ಯಕ್ಷರ ಆದೇಶಕ್ಕೆ ಕ್ಯಾರೇ ಎನ್ನದಿರುವುದು ಕಂಡುಬಂತು.
ಚುನಾವಣೆಗೆ ನಿಲ್ಲಲ್ಲ
ಗ್ರಾಪಂನಿಂದ ಸ್ಥಳೀಯ ಸಂಸ್ಥೆಗಳ ಹಾಗೂ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದು ಇಂದು ಸುಲಭದ ಮಾತಲ್ಲ. ಕಲುಷಿತಗೊಂಡಿರುವ ಚುನಾವಣೆ ಪ್ರಕ್ರಿಯೆಯಿಂದ ಬೇಸತ್ತು ಮುಂದೆ ಯಾವ ಪಕ್ಷದಿಂದಾದರೂ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ಡಿ.ಎಂ.ವಿಶ್ವನಾಥ್ ಖಚಿತ ಮಾತುಗಳನ್ನಾಡಿದರು.