ಜಿಲ್ಲೆ

ಹಾರೋಬೆಲೆ ಡ್ಯಾಂಗೆ ಚಾಲನೆ ನೀಡಿದ್ದೇ ದೇವೇಗೌಡ: ಕಾಂಗ್ರೆಸ್​ ಆರೋಪಕ್ಕೆ ಜೆಡಿಎಸ್​ ಮುಖಂಡ ಶಿವಕುಮಾರ್​ ತಿರುಗೇಟು

ಕನಕಪುರ: ಸ್ಥಗಿತಗೊಂಡಿದ್ದ ಹಾರೋಬೆಲೆ ಡ್ಯಾಂ ಕಾಮಗಾರಿಗೆ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಎಚ್​.ಡಿ. ದೇವೇಗೌಡರು ಚಾಲನೆ ನೀಡಿದ್ದರಿಂದಲೇ ಇಂದು ಹಾರೋಬೆಲೆ ಜಲಾಶಯದಿಂದ ರೈತರಿಗೆ ನೀರು ದಕ್ಕುತ್ತಿದೆ ಎಂದು ಜೆಡಿಎಸ್​ ಮುಖಂಡ ಎನ್​.ಎಸ್​.ಶಿವಕುಮಾರ್​ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವೇಗೌಡರು ಗೆದ್ದು ಹೋದ ೇತ್ರಕ್ಕೆ ಏನು ಮಾಡಿಲ್ಲ ಎಂಬ ಕಾಂಗ್ರೆಸ್​ ಮುಖಂಡರ ಹೇಳಿಕೆ ಬಾಲಿಶ ಮತ್ತು ಹಾಸ್ಯಾಸ್ಪದವಾಗಿದೆ. 1976&77ರಲ್ಲಿ ಶಾಸಕರಾಗಿದ್ದ ಎಸ್​.ಕರಿಯಪ್ಪ ಅವರು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ನಲ್ಲಹಳ್ಳಿಯ ಪಟೇಲ್​ ಶಿವಣ್ಣಗೌಡರು ಹಾರೋಬೆಲೆ ಅರ್ಕಾವತಿ ಜಲಾಶಯಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಎಸ್​. ಕರಿಯಪ್ಪ ಅವರ ನಿಧನದ ನಂತರ ಕಾಮಗಾರಿ ಸ್ಥಗಿತಗೊಂಡಿತು. 1983ರಲ್ಲಿ ಸಾತನೂರಿನಿಂದ ಕೆ.ಜಿ. ಶ್ರೀನಿವಾಸಮೂರ್ತಿ ಸ್ಪರ್ಧೆಗೆ ನಿಂತಾಗ ಸ್ಥಳಿಯ ಮುಖಂಡರು ಜಲಾಶಯ ನಿರ್ಮಾಣದ ಬೇಡಿಕೆ ಮುಂದಿಟ್ಟರು. ಕೂಡಲೇ ಸ್ಪಂದಿಸಿದ ಗೌಡರು ಈ ಜಲಾಶಯದ ಕಾಮಗಾರಿಗೆ ಪುನಶ್ಚೇತನ ನೀಡಿದರು. ಎಚ್​ಡಿಕೆ ಮುಖ್ಯಮಂತ್ರಿಯಾಗಿದ್ದಾಗ ಅನೇಕ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಟೀಕೆ ಮಾಡುವವರು ಸಾತನೂರು 1983ರ ಹಿಂದೆ ಹೇಗಿತ್ತು ಹಾಗೂ ಜನತಾ ಪರಿವಾರದ ಸರ್ಕಾರಗಳಲ್ಲಿ ಏನೇನು ಅಭಿವೃದ್ಧಿಯಾಗಿದೆ ಎಂದು ಹಿಂತಿರುಗಿ ಒಮ್ಮೆ ನೋಡಲಿ ಎಂದರು.

ತಾಪಂ ಮಾಜಿ ಸದಸ್ಯ ಕಬ್ಬಾಳೇಗೌಡ ಮಾತನಾಡಿ, ಎಚ್​ಡಿಕೆ ಸಿಎಂ ಆಗಿದ್ದಾಗ ರಾಜ್ಯದ ರೈತರ ಕೋಟ್ಯಂತರ ರೂ. ಸಾಲ ಮನ್ನಾ ಮಾಡಿದರು. ಇದರಿಂದ ಸಾತನೂರು ೇತ್ರದಲ್ಲಿ ಹೆಚ್ಚಾಗಿ ಕಾಂಗ್ರೆಸ್ಸಿಗರೇ ಲಾಭ ಪಡೆದಿದ್ದಾರೆ. ಸಾತನೂರಿನಲ್ಲಿ ಟೋಯೋಟಾ ಫಾಕ್ಟರಿ ಸ್ಥಾಪನೆಯಿಂದ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಭೀತಿಯಿಂದ ಕೈಗಾರಿಕೆ ಸ್ಥಾಪನೆಗೆ ಗ್ರಾಮಸ್ಥರು, ರೈತ ಸಂಟನೆಗಳು ವಿರೋಧ ವ್ಯಕ್ತಪಡಿಸಿದವು. ಇದರಲ್ಲಿ ಜೆಡಿಎಸ್​ ಮಖಂಡರ ಯಾವುದೇ ಪಾತ್ರವಿಲ್ಲ ಎಂದರು.

ತಾಪಂ ಮಾಜಿ ಸದಸ್ಯ ಯೋಗೇಶ್​ ಮಾತನಾಡಿ, ಸಾತನೂರು ತಾಲೂಕು ಕೇಂದ್ರವಾಗಬೇಕು ಎಂದು ಜನ ಒತ್ತಾಯ ಮಾಡಿದರೆ ಶಾಸಕ ಡಿ.ಕೆ ಶಿವಕುಮಾರ್​ ಸಾತನೂರನ್ನು ಕೈಬಿಟ್ಟು ಹಾರೋಹಳ್ಳಿಯನ್ನು ತಾಲೂಕು ಕೇಂದ್ರ ಮಾಡುವಂತೆ ನಾನಾ ಕಾರಣಗಳನ್ನು ಸರ್ಕಾರದ ಮುಂದಿಟ್ಟು ಸಾತನೂರು ಜನಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.

ತಾಲೂಕು ಜೆಡಿಎಸ್​ ಅಧ್ಯಕ್ಷ ಬಿ.ನಾಗರಾಜು ಮಾತನಾಡಿ, ಸ್ವಾತಂತ್ರ ನಂತರ ಕನಕಪುರ ಹಾಗೂ ಸಾತನೂರು ೇತ್ರದ ಎಲ್ಲ ರಂಗಗಳು ಅಭಿವೃದ್ಧಿಯಿಂದ ದೂರ ಉಳಿದಿವೆ. ಜನತಾ ಪರಿವಾರದ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಂಡಿವೆ ಎಂದರು.

ಜೆಡಿಎಸ್​ನ ರಾಜ್ಯ ಯುವ ಉಪಾಧ್ಯಕ್ಷ ಚಿನ್ನಸ್ವಾಮಿ, ನಗರಸಭೆ ಸದಸ್ಯರಾದ ಜಯರಾಮು, ಸ್ಟುಡಿಯೋ ಚಂದ್ರು ಮಾತನಾಡಿದರು. ತೊಪ್ಪಗನಹಳ್ಳಿ ಮಂಜುಕುಮಾರ್​, ರಾಜಗೋಪಾಲ್​, ರಾಮಕೃಷ್ಣ, ಕುಮಾರ್​, ಮಹೇಂದ್ರ, ಮಧು, ಕೃಷ್ಣ, ವಕೀಲ ನಂಜೇಗೌಡ, ಗುಳಗನಹಳ್ಳಿ ಬೈರಣ್ಣ, ಅಣ್ಣಾ ನಾಯಕ ಕೋಡಿಹಳ್ಳಿ ಪುಟ್ಟಸ್ವಾಮಿ, ಕೊತ್ತನೂರು ನಾರಾಯಣ, ಚಿಕ್ಕಾಲಹಳ್ಳಿ ಲೋಕೇಶ್​, ಅಲ್ಪ ಸಂಖ್ಯಾತರ ಮುಖಂಡ ಸರ್ದಾರ್​ ಖಾನ್​, ಆಸೀಫ್​ ಇದ್ದರು.