ರಾಮನಗರ: ಕಳೆದ ಹಲವಾರು ತಿಂಗಳಿಂದಲೂ ವಿಧಾನಸಭೆ ಚುನಾವಣೆಗಾಗಿ ತೀವ್ರ ಹೋರಾಟ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತದಾನದ ಮರು ದಿನ ಗುರುವಾರ ತಮ್ಮ ಸ್ವ ಕ್ಷೇತ್ರ ಕನಕಪುರದಲ್ಲಿ ರಿಲ್ಯಾಕ್ಸ್ ಮೂಡ್ ಗೆ ಜಾರಿ ದೋಸೆ ಸವಿದು, ಆತ್ಮೀಯರೊಂದಿಗೆ ಚರ್ಚೆ ನಡೆಸುವ ಮೂಲಕ ದಿನ ಕಳೆದರು.
ಬುಧವಾರ ಮತದಾನಕ್ಕೆ ಬಂದು ಕನಕಪುರದಲ್ಲಿಯೇ ವಾಸ್ತವ್ಯ ಹೂಡಿದ್ದ ಡಿ.ಕೆ.ಶಿವಕುಮಾರ್ ಗುರುವಾರದ ಬೆಳಗಿನ ದಿನಚರಿಗಳನ್ನು ಮುಗಿಸಿ ನಗರದ ವಾಸು ಹೋಟೆಲ್‌ನ ದೋಸೆ ಹಾಗೂ ಇಡ್ಲಿಯನ್ನು ಸವಿದರು.
ವಾಸು ಹೋಟೆಲ್‌ಗೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹೋಟೆಲ್‌ಗೆ ಆಗಮಿಸಿದ ಅವರಿಗೆ ಹೋಟೆಲ್ ಮಾಲೀಕರ ಪುತ್ರ ಜನಾರ್ಧನ್ ಮಲ್ಲಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಇಡ್ಲಿ ಸವಿದ ನಂತರ ಮಾಲಿಕರ ಒತ್ತಾಯದ ಮೇರೆಗೆ ಇಲ್ಲಿನ ಪ್ರಸಿದ್ದ ಮಸಾಲೆ ದೋಸೆಯ ರುಚಿಯನ್ನು ಸಹ ಸವಿದರು.
ಈ ವೇಳೆ ಸಂಸದ ಡಿ.ಕೆ.ಸುರೇಶ್, ಮುಖಂಡರಾದ ಚಂದ್ರಶೇಖರ್, ತಿಮ್ಮಪ್ಪ, ಎಂ.ಡಿ.ಅಮ್ಜದ್, ಹರೀಷ್, ಪರಮೇಶ್ ಕೌನ್ಸಿಲರ್, ವಾಸು ಹೋಟೆಲ್ ಮಾಲೀಕರಾದ ರಾಮಚಂದ್ರು ಮತ್ತು ಜನಾರ್ಧನ, ಪುಟ್ಟಮಾದು, ಗಡ್ಡತಿಮ್ಮಪ್ಪ ಹಾಜರಿದ್ದರು.
ನಂತರ ಕೋಡಿಹಳ್ಳಿಯಲ್ಲಿರುವ ತಮ್ಮ ತಾಯಿ ಗೌರಮ್ಮ ಅವರನ್ನು ಬೇಟಿ ಮಾಡಿದ ಡಿ.ಕೆ.ಶಿವಕುಮಾರ್ ಸಹೋದರರು, ಅವರ ಕುಶಲೋಪರಿಯನ್ನು ವಿಚಾರಿಸಿ, ಆರ್ಶೀವಾದವನ್ನು ಪಡೆದುಕೊಂಡರು.