ಕನಕಗಿರಿ: ಪಟ್ಟಣದ ಬಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್ ಕಟ್ಟಡದ ಕಾಮಗಾರಿಯನ್ನು 15 ದಿನದೊಳಗೆ ಪೂರ್ಣಗೊಳಿಸಿ ಎಂದು ಗುತ್ತಿಗೆದಾರರಿಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಸೂಚಿಸಿದರು.
ಇಂದಿರಾ ಕ್ಯಾಂಟಿನ್, ಅಂಗವಿಕಲರ ಶೌಚಗೃಹ ಹಾಗೂ ಕರಡಿಗುಡ್ಡದ ರಸ್ತೆಯಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕದಲ್ಲಿ ನಡೆಯುತ್ತಿರುವ ಸಂಸ್ಕರಣಾ ಘಟಕದ ಫ್ಲಾಟ್ ಫಾರ್ಮ್, ಘಟಕದ ಶೆಡ್, ವೇಬ್ರಿಡ್ಜ್ ಹಾಗೂ ವಿವಿಧ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು.
ಈಗಾಗಲೇ ಭಾಗ್ಯನಗರದಲ್ಲಿ ಇಂದಿರಾ ಕ್ಯಾಂಟೀನ್ ಪೂರ್ಣಗೊಂಡಿದೆ. ಹಲವೆಡೆ ಗುತ್ತಿಗೆ ಪಡೆಯುವುದರಿಂದ ಬಾಕಿ ಕಾಮಗಾರಿಗಳನ್ನು ಮುಗಿಸಲಾಗುತ್ತದೆ. ಮತ್ತೊಮ್ಮೆ ಗುತ್ತಿಗೆದಾರರಿಗೆ ಪೂರ್ಣಗೊಳಿಸಲು ಸೂಚಿಸಲಾಗುವುದು ಎಂದರು.
ಇನ್ನು ಪಟ್ಟಣದ ಅನಧಿಕೃತ ಆಸ್ತಿಗಳನ್ನು ಬಿ-ಖಾತಾದ ಆಸ್ತಿಗಳನ್ನಾಗಿ ಪರಿಗಣಿಸಿ ಆನ್‌ಲೈನ್‌ನಲ್ಲಿ ನಮೂನೆ 3 ನೀಡಲು ಮೇ 10 ಕೊನೆಯ ದಿನವೆಂದು ಸರ್ಕಾರ ಸೂಚಿಸಿದೆ. ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಬಿ ಖಾತೆಯ ಆಸ್ತಿಯನ್ನು ಹೊಂದಿದವರು ತಾವು ಖರೀದಿಸಿದ ಆಸ್ತಿಯ ದಾಖಲೆಗಳೊಂದಿಗೆ ಪಟ್ಟಣ ಪಂಚಾಯಿತಿಗೆ 2016ರಿಂದ ಕಳೆದ ವರ್ಷದವರೆಗೆ ದಂಡ, ಶುಲ್ಕ ಹಾಗೂ ಪ್ರಸಕ್ತ ವರ್ಷ ಮಾತ್ರ ದುಪ್ಪಟ್ಟು ತೆರಿಗೆ ಕಟ್ಟಿ ಫಾರ್ಮ್-3 ಪಡೆದುಕೊಳ್ಳಬೇಕು ಎಂದರು.