ಕನಕಗಿರಿ ತಾಲೂಕಿನ ಸಿರವಾರ ಗ್ರಾಮದ ಅಚ್ಚಪ್ಪ ಹೆಬ್ಬುಲಿ ಎನ್ನುವವರ ಬತ್ತಿದ ಬೋರ್‌ವೆಲ್‌ನಲ್ಲಿ ನೀರು ಬರುತ್ತಿರುವುದನ್ನು ರೈತ ಹನುಮೇಶ ಹೆಬ್ಬುಲಿ ತೋರಿಸಿದರು.  
ಜಿಲ್ಲೆ

ಬತ್ತಿದ್ದ ಬೋರ್‌ವೆಲ್‌ನಲ್ಲಿ ಉಕ್ಕುತ್ತಿರುವ ನೀರು

ಕನಕಗಿರಿ: ಅಂತರ್ಜಲ ಕುಸಿತದಿಂದ ಕಳೆದ ಐದಾರು ವರ್ಷಗಳ ಹಿಂದೆ ಬತ್ತಿ ಹೋಗಿದ್ದ ತಾಲೂಕಿನ ಸಿರವಾರ ಗ್ರಾಮದ ರೈತನ ಬೋರ್‌ವೆಲ್‌ನಲ್ಲಿ ತಾನಾಗಿಯೇ ನೀರು ಉಕ್ಕಿ ಹರಿಯುತ್ತಿದ್ದು ರೈತರನ್ನು ಅಚ್ಚರಿಗೊಳಿಸಿದೆ.

ಬರ ಪೀಡಿತ ಪ್ರದೇಶವಾಗಿರುವ ಕನಕಗಿರಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಮಳೆಯಿಲ್ಲದೇ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿತ್ತು. ಲಕ್ಷಾಂತರ ರೂ. ವ್ಯಯಿಸಿ ಕೈ ಸುಟ್ಟುಕೊಂಡು ರೈತರು ಕೊನೆಗೆ ಮಳೆಯನ್ನು ನಂಬಿ ಬೇಸಾಯ ಆರಂಭಿಸಿದ್ದರು. ಪ್ರಸ್ತುತ ವರ್ಷ ಸುರಿದ ಮಳೆಗೆ ತಾಲೂಕಿನ ಸಿರವಾರ, ಗೋಡಿನಾಳ ಭಾಗದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಚೆಕ್ ಡ್ಯಾಂಗಳಲ್ಲಿ ನೀರು ತುಂಬಿಕೊಂಡಿದ್ದು, ಅಂತರ್ಜಲವೂ ಹೆಚ್ಚಿದೆ.

ಈ ನಿಟ್ಟಿನಲ್ಲಿ ಬತ್ತಿ ಹೋಗಿದ್ದ ನೂರಾರು ಅಡಿಯ ಸಿರವಾರದ ಅಚ್ಚಪ್ಪ ಹೆಬ್ಬುಲಿ ಎನ್ನುವವರ ಬೋರ್‌ವೆಲ್‌ನಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇನ್ನುಳಿದ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ರೈತರಿಗೆ ಸಂತಸ ತರಿಸಿದೆ.

ಬತ್ತಿದ ಬೋರ್‌ವೆಲ್‌ನಲ್ಲಿ ನೀರು ಬಂದಿರುವುದರಿಂದ ಸುತ್ತಲಿನ ರೈತರೂ ತಮ್ಮ ಜಮೀನುಗಳಲ್ಲಿ ಬತ್ತಿ ಹೋಗಿರುವ ಬೋರ್‌ವೆಲ್‌ಗಳಲ್ಲಿ ನೀರು ಬಂದಿದೆಯೇ ಎಂದು ನೋಡಲು ಮುಂದಾಗುತ್ತಿದ್ದಾರೆ. ಹವಾಮಾನ ಇಲಾಖೆಯು ಇನ್ನು ಹಲವು ದಿನಗಳ ಕಾಲ ಮಳೆ ಬೀಳುವ ಮುನ್ಸೂಚನೆ ನೀಡಿದೆ. ಅದರಂತೆ ಮಳೆಯಾದಲ್ಲಿ ಅಂತರ್ಜಲ ಇನ್ನಷ್ಟು ಹೆಚ್ಚಾಗಲಿದೆ ಎನ್ನುವ ಮಾತುಗಳು ರೈತರದ್ದು.