ಕನಕಗಿರಿ ತಾಲೂಕಿನ ಸೋಮಸಾಗರದ ಮಸೀದಿಯಲ್ಲಿ ಪುಸ್ತಕಗೂಡನ್ನು ತಾಪಂ ಇಒ ರಾಜಶೇಖರ ಸ್ಥಾಪನೆ ಮಾಡಿದರು. ಪ್ರಮುಖರಾದ ಶರಣಪ್ಪ ನಾಯಕ, ಡಾ.ತಿಪ್ಪೇಸ್ವಾಮಿ, ಪಿಡಿಒ ಬಸವರಾಜ ಸಂಕನಾಳ, ಗ್ರಾಪಂ ಅಧ್ಯಕ್ಷ ಮಹೇಶ ಬೇವೂರು, ರೇಣುಕಪ್ಪ ಸೋಮನಾಳ, ನಾಗನಗೌಡ, ಮುಖ್ಯ ಶಿಕ್ಷಕ ಸತೀಶ್ ಇತರರಿದ್ದರು.  
ಜಿಲ್ಲೆ

ಸಮಾನತೆ ಹಿನ್ನೆಲೆಯಲ್ಲಿ ಪುಸ್ತಕ ಗೂಡು ಸ್ಥಾಪನೆ

ಕನಕಗಿರಿ: ವಿವಿಧ ಸಂಸ್ಕೃತಿಯನ್ನು ಗೌರವಿಸುತ್ತ ಜಾತಿ, ಧರ್ಮಗಳ ಭೇದಭಾವವಿಲ್ಲದೆ ಅನ್ಯೋನ್ಯದಿಂದ ಜೀವನ ಸಾಗುಸುತ್ತಿರುವ ರಾಷ್ಟ್ರ ಭಾರತ ಎಂದು ತಾಪಂ ಇಒ ರಾಜಶೇಖರ ಸೋಮಸಾಗರ ಹೇಳಿದರು.

ತಾಲೂಕಿನ ಸೋಮಸಾಗರದ ಮಸೀದಿಯಲ್ಲಿ ಗ್ರಂಥಾಲಯ ಮಾದರಿಯ ಪುಸ್ತಕಗೂಡುನ್ನು ಮಂಗಳವಾರ ಸ್ಥಾಪನೆ ಮಾಡಿ ಮಾತನಾಡಿದರು.

ಈ ಪುಸ್ತಕ ಗೂಡನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯಾಸಿಸುವ ಅಭ್ಯರ್ಥಿಗಳಿಗೆ ವೇದಿಕೆಯನ್ನು ಕಲ್ಪಿಸುವ ಉದ್ದೇಶ ಒಳಗೊಂಡಿದೆ. ಭ್ರಾತೃತ್ವ ಹಾಗೂ ಸಮಾನತೆ ಹಿನ್ನೆಲೆಯಲ್ಲಿ ಈ ಪುಸ್ತಕ ಗೂಡನ್ನು ಸ್ಥಾಪಿಸಲಾಗುತ್ತಿದ್ದು, ಇದರ ಸಂರಕ್ಷಣೆ, ಪೋಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇದು ಯಾವುದೇ ಜಾತಿ-ಧರ್ಮ ಎಂಬ ಭೇದ-ಭಾವವಿಲ್ಲದೆ ಓದುವ ಮನಸ್ಸಿಗೆ ಪುಸ್ತಕ ಒದಗಿಸುವ ಮಹತ್ವದ ಕಾರ್ಯಕ್ರಮವಾಗಿದೆ.

ಗ್ರಂಥಾಲಯವಿಲ್ಲದ ಗ್ರಾಮಗಳಲ್ಲಿ ಜನ ಸೇರುವ ಕಡೆಗಳಲ್ಲಿ ಬಿಡುವಿನ ವೇಳೆಯಲ್ಲಿ ವಯಸ್ಸಿಗನುಗುಣವಾಗಿ ಅವರವರ ಅಭಿರುಚಿಗನುಗುಣವಾಗಿ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಪುಸ್ತಕಗೂಡು ಎನ್ನುವ ಯೋಚನೆ ಶುರುವಾಗಿದೆ ಎಂದರು.

ರಾಗಾಪಂರಾ ಫೆಲೋಶಿಪ್ ಕಾರ್ಯಕ್ರಮದ ತಾಲೂಕಿನ ಸ್ಕಾಲರ್ ಆದ ಡಾ.ತಿಪ್ಪೇಸ್ವಾಮಿ ಎಂ. ಮಾತನಾಡಿ, ಈ ಪುಸ್ತಕ ಗೂಡು ಅತಿ ಕಡಿಮೆ ವೆಚ್ಚದಲ್ಲಿ ಬೆಲೆಕಟ್ಟಲಾಗದ ಜ್ಞಾನವನ್ನು ಒದಗಿಸುವ ಹಿನ್ನೆಲೆಯಲ್ಲಿ ಓದುವ ಹೃದಯಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

ಇಂದು ಈ ಪವಿತ್ರವಾದ ಮಸೀದಿಯಲ್ಲಿ ಗೂಡನ್ನು ಸ್ಥಾಪಿಸುತ್ತಿರುವುದರಿಂದ ಎಲ್ಲ ಧರ್ಮಗಳ ಸಮಾನತೆ, ಗೌರವ, ಧಾರ್ಮಿಕ ಭಾವೈಕ್ಯ ಸಂಕೇತವಾಗಿ ಮೂಡಿದ್ದು, ಈ ಗೂಡು ನಮ್ಮೆಲ್ಲರ ಸ್ವತ್ತು. ಇದನ್ನು ಉಳಿಸಿಕೊಂಡು, ಬೆಳಸಿಕೊಂಡು ಹೋಗುವುದು ನಮ್ಮೆಲರ ಹೊಣೆಗಾರಿಕೆ. ದಿನದ 24ಗಂಟೆಗಳ ಕಾಲ ತೆರೆದಿಡುವ ಈ ಪುಸ್ತಕ ಗೂಡು ಜ್ಞಾನದ ಗೂಡು. ಸದಾ ಸ್ಫೂರ್ತಿದಾಯಕ ಹಾಗೂ ಉದ್ಯೋಗಕಾಂಕ್ಷಿಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪ್ರಾರಂಭವಾಗಿದೆ ಎಂದರು. ಬಸರಿಹಾಳ ಗ್ರಾಪಂ ಪಿ.ಡಿ.ಒ ಬಸವರಾಜ ಸಂಕನಾಳ ಇತರರಿದ್ದರು.