ಕನಕಗಿರಿಯಲ್ಲಿ ಮಾದಿಗರ ಜಾಗೃತಿ ಪ್ರತಿಭಟನೆ ಕರಪತ್ರಗಳನ್ನು ಸಂಘಟಕರು ಬಿಡುಗಡೆಗೊಳಿಸಿದರು. ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಸುಭಾಷ್ ಕಂದಕೂರು, ಕಾರ್ಯಾಧ್ಯಕ್ಷ ಗಂಗಣ್ಣ ಸಿದ್ದಾಪೂರ, ಖಜಾಂಚಿ ಮರಿಯಪ್ಪ ದೊಡ್ಮನಿ, ಪ್ರಮುಖರಾದ ಮಹಾದೇವ ಬಡಿಗೇರ, ದುರುಗೇಶ ಕಂದಕೂರು ಇತರರಿದ್ದರು.  
ಜಿಲ್ಲೆ

ಮಾದಿಗರ ಜಾಗೃತಿ ಪ್ರತಿಭಟನೆ 26ರಂದು

ಕನಕಗಿರಿ: ಸುಪ್ರೀಂಕೋರ್ಟ್ ಅನುಮತಿ ನೀಡಿದರೂ ರಾಜ್ಯ ಸರ್ಕಾರ ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುಭಾಷ್ ಕಂದಕೂರು ದೂರಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಳೆದ ಆಗಸ್ಟ್ ತಿಂಗಳಲ್ಲಿ ಒಳ ಮೀಸಲಾತಿ ಹೋರಾಟದಲ್ಲಿ ಹಲವು ಹೋರಾಟಗಾರರು ಪ್ರಾಣ ತೆತ್ತಿದ್ದಾರೆ. ಆದರೆ, ನಮಗೆ ನೀಡಬೇಕಾದ ಮೀಸಲಾತಿ ವಿಚಾರದಲ್ಲಿ ಸರ್ಕಾರ ಮೊಂಡುತನ ಪ್ರದರ್ಶಿಸುತ್ತಿದೆ. ಈ ಕ್ರಮ ಖಂಡಿಸಿ ಕನಕಗಿರಿ ಪಟ್ಟಣದಲ್ಲಿ ಡಿ.26ರಂದು ಮಾದಿಗರ ಜಾಗೃತಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾದಿಗ ಸಮಾಜದ ಹಿರಿಯ ಮುಖಂಡ ದುರಗಪ್ಪ ಗಂಗಾವತಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಮಾದಿಗರ ಮೇಲೆ ಕರುಣೆಯಿಲ್ಲ. ಮುಖ್ಯಮಂತ್ರಿಗೆ ಮಾದಿಗರು ಎಂದರೆ ಅಲರ್ಜಿ ಎಂದು ಕಾಣುತ್ತಿದೆ. ಒಳ ಮೀಸಲಾತಿ ಜಾರಿಗೊಳಿಸಿ ಮಾದಿಗರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ದಂಡೋರ ಸಮಿತಿ ಜಿಲ್ಲಾ ಕಾರ್ಯಾಧ್ಯಕ್ಷ ಗಂಗಣ್ಣ ಸಿದ್ದಾಪೂರ, ಖಜಾಂಚಿ ಮರಿಯಪ್ಪ ದೊಡ್ಮನಿ, ಪ್ರಮುಖರಾದ ಮಹಾದೇವ ಬಡಿಗೇರ, ದುರುಗೇಶ ಕಂದಕೂರು ಇದ್ದರು.