ಕನಕಗಿರಿ ತಾಲೂಕಿನ ತಿಪ್ಪನಾಳ ಗ್ರಾಮದ ವಿದ್ಯಾರ್ಥಿನಿಯರು ಬಸ್ ಬಾರದಿದ್ದರಿಂದ ನಡೆದುಕೊಂಡು ಕಲಕೇರಿ ಕ್ರಾಸ್‌ಗೆ ಬರುತ್ತಿರುವುದು.  
ಜಿಲ್ಲೆ

ಕಲಕೇರಿಗೆ ವಿದ್ಯಾರ್ಥಿಗಳ ಕಾಲ್ನಡಿಗೆ, ಬಾರದ ಬಸ್‌ಗೆ ಕಾದು ನಡೆದೇ ಶಾಲೆಗೆ ತೆರಳಿದ ಮಕ್ಕಳು

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಬಾರದಿದ್ದರಿಂದ ಪ್ರೌಢಶಾಲಾ ಶಿಕ್ಷಣಕ್ಕಾಗಿ ಕಲಕೇರಿಗೆ ತೆರಳುವ ತಾಲೂಕಿನ ತಿಪ್ಪನಾಳ ಗ್ರಾಮದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲ್ನಡಿಗೆ ಹಾಗೂ ಖಾಸಗಿ ವಾಹನದಲ್ಲಿ ಡ್ರಾಪ್ ಕೇಳಿ ಮಂಗಳವಾರ ಶಾಲೆಗೆ ತೆರಳಿದರು.

ತಿಪ್ಪನಾಳದಲ್ಲಿ 1ರಿಂದ 7ನೇ ತರಗತಿಯವರೆಗೆ ಶಾಲೆಯಿದ್ದು, 8ರಿಂದ 10ನೇ ತರಗತಿವರೆಗಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಕಲಕೇರಿಯಲ್ಲಿನ ಪ್ರೌಢ ಶಾಲೆಗೆ ತೆರಳುತ್ತಾರೆ. ಇವರ ಅನುಕೂಲಕ್ಕಾಗಿ ಕನಕಗಿರಿಯಿಂದ ತಿಪ್ಪನಾಳ ಮಾರ್ಗವಾಗಿ ಕಲಕೇರಿಗೆ ತೆರಳುವ ಬಸ್ ಪುನಃ ಕನಕಗಿರಿಗೆ ಆಗಮಿಸುತ್ತದೆ. ಇದು ಸಮರ್ಪಕವಾಗಿ ಸಂಚರಿಸುವುದಿಲ್ಲ. ಮಂಗಳವಾರ ಗ್ರಾಮಕ್ಕೆ ಬಂದಿಲ್ಲವಾದ್ದರಿಂದ ವಿದ್ಯಾರ್ಥಿಗಳು ತಿಪ್ಪನಾಳದಿಂದ ಕಲಕೇರಿಯ ಕ್ರಾಸ್‌ವರೆಗೆ ನಡೆದುಕೊಂಡು ಬಂದು ಖಾಸಗಿ ವಾಹನಗಳನ್ನು ನಿಲ್ಲಿಸಿ ಸಹಾಯ ಕೇಳಿ ತೆರಳುತ್ತಿರುವುದು ಕಂಡು ಬಂತು. ಇನ್ನು ಕೆಲವರು ನಡೆದುಕೊಂಡೇ ಶಾಲೆಗೆ ತೆರಳಿದರು.

9.30ಕ್ಕೆ ಬರಬೇಕಾದ ಬಸ್ 10 ಗಂಟೆಯಾದರೂ ಬಂದಿಲ್ಲ. ಶನಿವಾರವೂ ಬಂದಿಲ್ಲ. ಮಂಗಳವಾರವೂ ಬಂದಿಲ್ಲ. ಹೀಗೆ ಹಲವು ಬಾರಿ ಬಸ್ ಗ್ರಾಮಕ್ಕೆ ಬರುವುದಿಲ್ಲ. ಇದರಿಂದ ಕೆಲವರು ಮನೆಗೆ ತೆರಳಿದರೆ, ನಾವುಗಳು ಕಾದು ಕಾದು ಕೊನೆಗೆ ನಡೆದುಕೊಂಡು, ಇಲ್ಲವೇ ಖಾಸಗಿ ವಾಹನಗಳಲ್ಲಿ ಶಾಲೆಗೆ ತೆರಳುತ್ತೇವೆ. ನಾವು ಹೋಗುವಷ್ಟರಲ್ಲಿ ಒಂದೆರಡು ತರಗತಿಗಳು ಮುಗಿದಿರುತ್ತವೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಬಸ್ ನಂಬಿಕೊಂಡು ಕಲಕೇರಿ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹೀಗೆ ಆಗಾಗ ತೊಂದರೆಯಾಗುತ್ತಿದ್ದರಿಂದ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀಳುತ್ತದೆ ಎನ್ನುವ ಆತಂಕ ಪಾಲಕರದ್ದಾಗಿದೆ. ಇನ್ನು ಖಾಸಗಿ ವಾಹನಗಳಲ್ಲಿ ಡ್ರಾಪ್ ಪಡೆಯುವ ವಿದ್ಯಾರ್ಥಿನಿಯರಿಗೆ ಅನಾಹುತವಾದರೆ ಯಾರು ಹೊಣೆ? ಎನ್ನುವ ಪ್ರಶ್ನೆಯೂ ಕಾಡತೊಡಗಿದೆ.