ಕನಕಗಿರಿ ತಾಲೂಕು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ಗಣೇಶರೆಡ್ಡಿ, ಸಣ್ಣ ಹನುಮನಗೌಡ, ಮರಿಯಪ್ಪ ಹುಗ್ಗಿ, ಮರಿಯಪ್ಪ ಕನಕಾಪುರ, ಕೃಷ್ಣ ಖಾಕಿ ಇತರರಿದ್ದರು. 
ಜಿಲ್ಲೆ

ಕೃಷಿಹೊಂಡ ಹೆಚ್ಚಿಸಲು ಆದ್ಯತೆ ನೀಡಲಿ

ಕನಕಗಿರಿ: ಬೆಳೆ ಪರಿಹಾರ ಒದಗಿಸುವುದೂ ಸೇರಿ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಕೃಷಿ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪಗೆ ಮಂಗಳವಾರ ಪ್ರತ್ಯೇಕ ಮನವಿ ಸಲ್ಲಿಸಿದರು.

ಇತ್ತೀಚೆಗೆ ಸುರಿದ ಜಿಟಿ ಜಿಟಿ ಮಳೆಗೆ ಹಾಗೂ ತಂಪು ವಾತಾವರಣದಿಂದ ಹತ್ತಿ ಹಾಗೂ ಸಜ್ಜೆ ಬೆಳೆಗಳಿಗೆ ಕೀಟ ಭಾದೆ ತಗುಲಿ ರೈತರಿಗೆ ನಷ್ಟವಾಗುತ್ತಿದ್ದು, ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸಬೇಕು.

ನಷ್ಟ ಪರಿಹಾರದ ಸಮೀಕ್ಷೆಯಲ್ಲಿ ಬೀಜೋತ್ಪಾದನೆ ಹತ್ತಿ ಎಂದು ಪ್ರತ್ಯೇಕವಾಗಿ ನಮೂದಿಗೆ ಅವಕಾಶವಿಲ್ಲವಾದ್ದರಿಂದ ಎಲ್ಲ ಹತ್ತಿ ಬೆಳೆಗೆ ಪರಿಹಾರ ಒದಗಿಸಬೇಕು. ಕನಕಗಿರಿ ತಾಲೂಕು ವ್ಯಾಪ್ತಿಗೆ ಪ್ರತಿ ವರ್ಷ ಕೆಲವೇ ಜನರಿಗೆ ಕೃಷಿ ಹೊಂಡಗಳನ್ನು ನೀಡುತ್ತಿದ್ದು, ಈ ಬಾರಿ ಹೆಚ್ಚಿಗೆ ಆದ್ಯತೆ ನೀಡಬೇಕು.

ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕನಕಗಿರಿ ತಾಲೂಕನ್ನು ಸಂಪೂರ್ಣವಾಗಿ ನೀರಾವರಿ ಮಾಡಬೇಕು. ಬಡವರ ಅನುಕೂಲಕ್ಕಾಗಿ ಡ್ರೈವಿಂಗ್ ಲೈಸನ್ಸ್ ಶಿಬಿರವನ್ನು ಏರ್ಪಡಿಸಬೇಕು ಹಾಗೂ ರೈತ ಸಂಘಟನೆಗಳ ಸೋಗಿನಲ್ಲಿ ಕೃಷಿ ಅಧಿಕಾರಿಗಳಿಗೆ ಬೆದರಿಕೆಯೊಡ್ಡುವವರ ವಿರುದ್ಧ ಕ್ರಮ ಜರುಗಿಸಿ, ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಆಗ್ರಹಿಸಿದರು.