ಅಚ್ಚಮ್ಮ ಬಾವಿ ಹೊರನೋಟ.  
ಜಿಲ್ಲೆ

ಅಚ್ಚಮ್ಮ ಬಾವಿ ಸಂರಕ್ಷಿತ ಸ್ಮಾರಕಕ್ಕೆ ಚಿಂತನೆ

ಕನಕಗಿರಿ: ತಾಲೂಕಿನ ಸೋಮಸಾಗರ ವ್ಯಾಪ್ತಿಯ ಅಚ್ಚಮ್ಮ ಬಾವಿಯನ್ನು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಸಂರಕ್ಷಿಸಲು ಪುರಾತತ್ವ ಇಲಾಖೆ ಚಿಂತನೆ ನಡೆಸಿದೆ. ಈ ಸ್ಮಾರಕವನ್ನು ರಕ್ಷಿಸಲು ಕರ್ನಾಟಕ ಪ್ರಾಚೀನ ಮತ್ತು ಸ್ಮಾರಕಗಳ ಪುರಾತತ್ವ ನಿವೇಶನಗಳು, ಅವಶೇಷಗಳು ಅಧಿನಿಯಮ 1961 ಕಲಂ 4(1)ರಡಿ ಪ್ರವಾಸೋದ್ಯಮ ಇಲಾಖೆ ಅಧೀನ ಕಾರ್ಯದರ್ಶಿ ಮಹಮ್ಮದ್ ಇಬ್ರಾಹಿಂ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾರೆ.

ಅಚ್ಚಮ್ಮ ಬಾವಿ ಸೋಮಸಾಗರ ಗ್ರಾಮದ ಸರ್ವೇ ನಂ.53ರ ಖಾಸಗಿ ಜಮೀನಿನಲ್ಲಿದೆ. ಈ ಸ್ಮಾರಕ ಸೇರಿ ಇದರ ರಕ್ಷಣೆಗೆ 60/60 ಅಡಿ ಆಗ ಬೇಕೆಂದು ಆದೇಶದಲ್ಲಿ ತಿಳಿಸಲಾಗಿದ್ದು, ಇದರಿಂದ ಜಮೀನಿನವರು 3,600 ಚ.ಅಡಿ ಭೂಮಿ ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಬಾಧಿತರಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ 60 ದಿನಗಳ ಕಾಲಾವಕಾಶ ನೀಡಿದೆ.

ಬಾವಿಯು ಪಾಳು ಬಿದ್ದಿದ್ದರೂ ಇಂದಿಗೂ ಉಬ್ಬು ಶಿಲ್ಪದಲ್ಲಿರುವ ಅಚ್ಚಮ್ಮಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಕನಕಗಿರಿಯನ್ನಾಳಿದ ಅರಸರಲ್ಲಿ ಇಮ್ಮಡಿ ಉಡುಚ ನಾಯಕನ ಮೂವರು ಪತ್ನಿಯರಲ್ಲಿ ಅಚ್ಚಮ್ಮ ಕೂಡ ಒಬ್ಬರು. ಈಕೆಯೇ ಜಮೀನುಗಳಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಹಾಗೂ ಕುಡಿವ ನೀರಿಗಾಗಿ ಈ ಬಾವಿ ನಿರ್ಮಿಸಿದ್ದಾಳೆ ಎಂದು ಇತಿಹಾಸಕಾರ ಶರಣಬಸಪ್ಪ ಕೋಲ್ಕಾರ್ ಹೇಳುತ್ತಾರೆ.

ಅಚ್ಚಮ್ಮ ಬಾವಿ ಸಂರಕ್ಷಣೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ಇದರ ಆಧಾರದ ಮೇಲೆ ಮೇಲಧಿಕಾರಿಗಳು ರಾಜ್ಯ ಸಂರಕ್ಷಿತ ಸ್ಮಾರಕವೆಂದು ಘೋಷಣೆ ಮಾಡುವುದಕ್ಕೆ ಕಂದಾಯ ಇಲಾಖೆಗೆ ಮಾಹಿತಿ ಕಳುಹಿಸಲಾಗಿದೆ.

ಶೇಜೇಶ್ವರ

ಡಿಡಿ ಪುರಾತತ್ವ ಇಲಾಖೆ, ಹಂಪಿ

ಸಂರಕ್ಷಿತ ಸ್ಮಾರಕ ಘೋಷಣೆಗೆ ಇಲಾಖೆಯ ಅಧೀನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಭೂಮಿಯ ಮಾಲೀಕರೂ ಸೇರಿ ಯಾರಿಗಾದರು ತಕರಾರು ಇದ್ದರೆ ಅಕ್ಷೇಪಣೆ ಸಲ್ಲಿಸಬಹುದು.

ವಿಶ್ವನಾಥ ಮುರುಡಿ

ತಹಸೀಲ್ದಾರ್ ಕನಕಗಿರಿ