ಕನಕಗಿರಿ: ಪಟ್ಟಣದ ಬಾಲಕಿಯರ ಹಿರಿಯ ಪ್ರಾಥಮಿಕ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಶಾಲೆಯಲ್ಲಿ ಪಾಲಕರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಸಭೆ ನಡೆಸಿ, ಪ್ರಾಚಾರ್ಯ ಬಸವರಾಜ ಬಡಿಗೇರ ಮೂಲಕ ಬಿಇಒಗೆ ಮನವಿ ಸಲ್ಲಿಸಿದರು.
ಪಾಲಕ ಶಾಂತಪ್ಪ ಬಸರಿಗಿಡದ ಮಾತನಾಡಿ, ಶಾಲೆ ಆವರಣ ಚಿಕ್ಕದಾಗಿದ್ದು ಕೊಠಡಿ ಕೊರತೆ ಇದೆ. ಮೈದಾನವೂ ಇಲ್ಲ. ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಿಸಲಾಗಿಲ್ಲ. ಆದ್ದರಿಂದ ಪಪೂ ಕಾಲೇಜಿನ ಆವರಣದಲ್ಲಿ ಇರುವ ನೂತನ ಕೊಠಡಿಗಳಿಗೆ ಸ್ಥಳಾಂತರಿಸಬೇಕೆಂದು ಪಾಲಕರು ಒತ್ತಾಯಿಸಿದರು. ಪ್ರಮುಖರಾದ ಕನಕರೆಡ್ಡಿ ಹುಲಿಹೈದರ್, ಸರಗಪ್ಪ ಕಂಪ್ಲಿ, ಹನುಮಂತ ಆರೇರ, ದುರಗಪ್ಪ ಗೊರಳಕೇರಿ ಇತರರಿದ್ದರು.