ಕನಕಗಿರಿ: ಅಖಂಡ ಗಂಗಾವತಿ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಬುಧವಾರ ಅಕ್ಕಿ, ಎಣ್ಣೆ ಹಾಗೂ ಗೋಧಿ ಸರಬರಾಜು ಮಾಡಲು ಇಲಾಖೆ ಮುಂದಾಗಿದ್ದು, ಮೊದಲ ಭಾಗವಾಗಿ ಪಟ್ಟಣದಿಂದ ಹಂಚಿಕೆ ಆರಂಭಿಸಲಾಗಿದೆ.
ಶಾಲೆಗಳಿಗೆ ದಾಸ್ತಾನು ಬರುವ ಬಗ್ಗೆ ಅಧಿಕಾರಿಗಳು ಆಯಾ ಶಾಲೆಯ ಮುಖ್ಯಶಿಕ್ಷಕರಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ರವಾನೆ ಮಾಡಿದ್ದು, ತೊಗರಿ ಬೇಳೆ ಹೊರೆತುಪಡಿಸಿ ಉಳಿದ ಪಾದಾರ್ಥಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ದಾಸ್ತಾನಿಗಾಗಿ ಅಲೆದಾಡುವುದು, ಮತ್ತೊಂದು ಶಾಲೆಯಲ್ಲಿ ಬೇಡುವುದು ತಪ್ಪಿತಲ್ಲ ಎಂದು ಹಲವು ಶಿಕ್ಷಕರು ನಿಟ್ಟಿಸಿರು ಬಿಟ್ಟಿದ್ದಾರೆ.
ಶಾಲೆ ಆರಂಭವಾಗಿ ತಿಂಗಳಾಗುತ್ತಾ ಬಂದಿದ್ದು, ಮಕ್ಕಳಿಗೆ ಬಿಸಿಯೂಟ ತಯಾರಿಸಲು ದಾಸ್ತಾನು ಇರಲಿಲ್ಲ. ಇದರಿಂದ ಶಿಕ್ಷಕರು ಅಕ್ಕಿ, ಬೇಳೆ, ಎಣ್ಣೆ ಹಾಗೂ ಗೋಧಿಗಾಗಿ ಅಕ್ಕಪಕ್ಕದ ದೊಡ್ಡ ಶಾಲೆಗಳಿಗೆ ದುಂಬಾಲು ಬಿದ್ದಿದ್ದು, ಅಲ್ಲಿಂದ ಪಾದಾರ್ಥಗಳನ್ನು ತಂದು ಮಧ್ಯಾಹ್ನದ ಊಟ ತಯಾರಿಸುತ್ತಿದ್ದರು.
ಆದರೆ, ನೆರೆಯ ಶಾಲೆಯಲ್ಲೂ ದಾಸ್ತಾನು ದೊರೆಯದಿದ್ದರಿಂದ ಕೆಲ ಶಾಲೆಗಳ ಶಿಕ್ಷಕರು ಖರೀದಿಸಿ ಅಡುಗೆ ತಯಾರಿಸಿದ್ದರು. ಈ ಕುರಿತು ಜೂ.26ರಂದು ‘ಮಧ್ಯಾಹ್ನದ ಬಿಸಿಯೂಟಕ್ಕಿಲ್ಲ ರೇಷನ್’ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಆಹಾರ ಇಲಾಖೆ ಬುಧವಾರದಿಂದಲೇ ತಾಲೂಕಿನ ಶಾಲೆಗಳಿಗೆ ರೇಷನ್ ಹಂಚಿಕೆ ಆರಂಭಿಸಿದ್ದು, ಮೂರ‌್ನಾಲ್ಕು ದಿನಗಳಲ್ಲಿ ಗಂಗಾವತಿ ತಾಲೂಕಿನಲ್ಲಿ ದಾಸ್ತಾನು ಹಂಚಿಕೆ ಪೂರ್ಣಗೊಳ್ಳಲಿದೆ. ಆದರೆ, ತೊಗರಿ ಬೇಳೆ ಸರಬರಾಜಿಗೆ ಟೆಂಡರ್ ನಡೆಯದಿದ್ದರಿಂದ ಏನು ಮಾಡಬೇಕೆಂಬ ಚಿಂತೆ ಮಾತ್ರ ಶಿಕ್ಷಕರಿಗಿದೆ.