ಕನಕಗಿರಿ: ಪಿಂಜಾರ (ನದಾಫ್) ಸೇರಿ ಇತರ 13 ಜಾತಿಗಳ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪಿಂಜಾರ ತಾಲೂಕು ಘಟಕದಿಂದ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಮಾಬುಸಾಬ್ ಗುರಿಕಾರ ಮಾತನಾಡಿ, ರಾಜ್ಯಾದ್ಯಂತ 25 ಲಕ್ಷ ಜನಸಂಖ್ಯೆಯಿರುವ ಪಿಂಜಾರ (ನದಾಫ್) ಸಮುದಾಯ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ. ನಮ್ಮ ಸಮಾಜವು ಇಸ್ಲಾಂ ಧರ್ಮದ ಪಂಗಡದಲ್ಲಿದ್ದರೂ ಸರ್ಕಾರದ ವೃತ್ತಿಪರ ಜಾತಿಗಳ ವಿಂಗಡನೆ ಅನ್ವಯ ನಾವುಗಳು ಪ್ರವರ್ಗ 1ರಲ್ಲಿ ಬರುತ್ತಿದ್ದೇವೆ. ಇದರಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದೇವೆ. ಈ ಸಮಸ್ಯೆ ನಿವಾರಣೆಗಾಗಿ ನಮ್ಮ ಹಿರಿಯರು ಹೋರಾಟ ಮಾಡುತ್ತಾ ಬಂದಿದ್ದರಿಂದ ಹಿಂದಿನ ಬಿಜೆಪಿ ಸರ್ಕಾರ ಪಿಂಜಾರ (ನದಾಫ್) ಸೇರಿ ಇತರ 13 ಜಾತಿಗಳ ಅಭಿವೃದ್ಧಿ ನಿಗಮಗಳನ್ನು ಘೋಷಣೆ ಮಾಡಿದೆ.
ಆದರೆ, ಪ್ರಸಕ್ತ ಸರ್ಕಾರಕ್ಕೆ ನಮ್ಮ ಸಮಾಜದ ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ಒತ್ತಾಯ ಮಾಡುತ್ತಾ ಬಂದಿದ್ದರೂ ಸ್ಪಂದನೆ ದೊರೆತಿಲ್ಲ. ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಪರ ನಮ್ಮ ಸರ್ಕಾರವೆಂದಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ದೂರಿದರು.
ಶೋಷಿತ, ಹಿಂದುಳಿದ ವರ್ಗಗಳ ಪರವಾದ ಮುಖ್ಯಮಂತ್ರಿ ಎನ್ನುವ ಪಟ್ಟ ಹೊಂದಿರುವ ಸಿದ್ರಾಮಯ್ಯ ನವರು ನಮ್ಮ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಹೊಸ ಯೋಜನೆಗಳನ್ನು ರೂಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಧರಣಿ ಸತ್ಯಾಗ್ರಹಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ರಾಜಾಸಾಬ ನಂದಾಪುರ, ಹೊನ್ನೂರ್‌ಸಾಬ್ ಉಪ್ಪು, ಡಾ.ಐ.ಎಚ್. ಕಿನ್ನಾಳ, ಲಾಲ್‌ಸಾಬ್ ನದಾಫ್, ಆಸೀಫ್, ಚಂದುಸಾಬ್ ಗುರಿಕಾರ, ಹುಸೇನ್‌ಸಾಬ್ ಗೋರಳ್ಳಿ, ಗೂಡಸಾಬ್ ಗುರಿಕಾರ, ಮಾಬುಸಾಬ್ ಡ್ರೈವರ್, ಮೈಬುಸಾಬ್ ಗುರಿಕಾರ, ದಾದಸಾಬ್ ವಟಪರವಿ ಇತರರಿದ್ದರು.