ಕನಕಗಿರಿ ತಾಲೂಕಿನ ಗೋಡಿನಾಳದ ರೈತ ಹನುಮಂತಪ್ಪ ಅವರ ಜಮೀನಿನಲ್ಲಿ ಸಾಕು ಕೋಳಿಯೊಂದಿಗೆ ಬೆರೆತ ಗಂಡು ನವಿಲು ನರ್ತಿಸುತ್ತಿರುವುದು.  
ಜಿಲ್ಲೆ

ಕೋಳಿಗಳೊಂದಿಗೆ ಮಯೂರ ನಡಿಗೆ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಮನುಷ್ಯರನ್ನು ಕಂಡರೆ ಮಾರುದ್ದ ಹಾರುವ ನವಿಲುಗಳ ನಡುವೆ ತಾಲೂಕಿನ ಗೋಡಿನಾಳ ಜಮೀನೊಂದರಲ್ಲಿ ಸಾಕಲಾಗಿರುವ ಕೋಳಿಗಳೊಂದಿಗೆ ಗಂಡು ನವಿಲೊಂದು ಹೊಂದಿಕೊಂಡು ಜೀವನ ಸಾಗಿಸುತ್ತಿದೆ.

ಹಿರೇಖೇಡದ ರೈತ ಹನುಮಂತಪ್ಪ ಬಂಡ್ರಾಳ, ಗೋಡಿನಾಳ ಸೀಮಾದ ಗುಡ್ಡದ ಪ್ರದೇಶದಲ್ಲಿನ ಜಮೀನಿನಲ್ಲಿ ವಾಸಿಸುತ್ತಿದ್ದಾರೆ. ಕೃಷಿ ಜತೆಗೆ ಕೋಳಿಗಳನ್ನು ಸಾಕಿಕೊಂಡಿದ್ದಾರೆ. ಆಕಸ್ಮಿಕವಾಗಿ ಕೋಳಿಗಳ ಜತೆಗೆ ಸೇರಿರುವ ಗಂಡು ನವಿಲು, ಕಳೆದ 2 ವರ್ಷಗಳಿಂದ ಇಲ್ಲಿಯೇ ಉಳಿದುಕೊಂಡಿದೆ.

ಹಗಲು ವೇಳೆ ಕೋಳಿಗಳೊಂದಿಗಿದ್ದು ಹೊಟ್ಟೆ ತುಂಬಿಸಿಕೊಂಡರೆ, ರಾತ್ರಿ ಮರವೇರಿ ವಿಶ್ರಮಿಸುತ್ತಿದೆ. 2 ವರ್ಷಗಳಿಂದ ನವಿಲು ಕೋಳಿಯೊಂದಿಗಿದ್ದರೂ ಅವುಗಳ ಗೂಡಿನಲ್ಲಿ ವಾಸವಿರದೆ ತನ್ನತ್ವವನ್ನು ಉಳಿಸಿಕೊಂಡಿದೆ. ಬೆಳಗಿನ ಜಾವ ಹಾಗೂ ಸಂಜೆ ಈ ನವಿಲು ನರ್ತಿಸುತ್ತಿದ್ದು, ಈ ದೃಶ್ಯ ನೋಡಲು ಸ್ನೇಹಿತರು, ಬಂಧುಗಳು ಹನುಮಂತಪ್ಪನ ಜಮೀನಿಗೆ ಬರುವುದು ಸಾಮಾನ್ಯವಾಗಿದೆ.

ತಾಲೂಕಿನಾದ್ಯಂತ ನವಿಲುಗಳ ಸಂತತಿ ಹೆಚ್ಚಾಗಿದೆ. ಗುಡ್ಡಗಾಡು ಪ್ರದೇಶದ ರೈತರ ಜಮೀನುಗಳಲ್ಲಿನ ಸಾಕಿದ ಕೋಳಿಗಳ ಜತೆಗೆ ಗಂಡು ನವಿಲು ಇರುವುದು ಅಪರೂಪ. ನವಿಲು ತನ್ನ ಸೀಮಿತ ಸ್ಥಳದಲ್ಲಿ ಮಾತ್ರ ವಾಸಿಸಲಿದೆ. ಗೂಡುಗಳಲ್ಲಿ ಅದು ವಾಸವಾಗಿರುವುದಿಲ್ಲ.ಶಿವಕುಮಾರ ಗಸ್ತು ವನ ಪಾಲಕ, ಕನಕಗಿರಿ