ಕನಕಗಿರಿ ತಾಲೂಕಿನ ನವಲಿಯ ಶ್ರೀ ಭೋಗಾಪುರೇಶ ಜಾತ್ರೆ ನಿಮಿತ್ತ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿ ರಥೋತ್ಸವ ಜರುಗಿತು.  
ಜಿಲ್ಲೆ

ನವಲಿ ಭೋಗಾಪುರೇಶ ರಥೋತ್ಸವ ಅದ್ದೂರಿ

ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಶ್ರೀ ಭೋಗಾಪುರೇಶ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನಕ್ಕೆ ವಿದ್ಯುತ್ ದೀಪಾಂಲಕಾರ ಮಾಡಲಾಗಿತ್ತು. ಬೆಳಗ್ಗೆ ದೇವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿದ್ದು, ಹೋಮ-ಹವನ ನಡೆಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿವರೆಡ್ಡಿ ಪೋ.ಪಾ. ಇವರ ಮನೆಯಿಂದ ಕಲಶ, ಶಂಕರ ಗೌಡ ಮಾ.ಪಾ. ಇವರ ಮನೆಯಿಂದ ಕಾಯಿ ಆಗಮಿಸಿದ ಬಳಿಕ ಭಕ್ತರು ದಿವಟಿಗೆ ಹಿಡಿದು ರಥಬೀದಿಯಲ್ಲಿ ತೇರು ಎಳೆದು ಸಂಭ್ರಮಿಸಿದರು. ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ಜೈ ಶ್ರೀರಾಮ್, ಗೋವಿಂದಾ ಗೋವಿಂದ ಎಂದು ಜೈಕಾರ ಹಾಕಿ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ತಹಸೀಲ್ದಾರ್ ವಿಶ್ವನಾಥ ಮುರುಡಿ, ಉಪ ತಹಸೀಲ್ದಾರ್ ಹನುಮಂತಪ್ಪ, ಶಿರಸ್ತೇದಾರ್ ಪ್ರಕಾಶ ಸವಡಿ, ತಾಲೂಕು ಪಂಚಾಯಿತಿ ಇಒ ರಾಜಶೇಖರ, ಪಿಡಿಒ ವೀರಣ್ಣ ನಕ್ರಳ್ಳಿ, ಗ್ರಾಪಂ ಅಧ್ಯಕ್ಷ ಮಹಾದೇವಮ್ಮ ಹೇರೂರು, ಪ್ರಮುಖರಾದ ಗಂಗಾಧರಗೌಡ, ವಿರುಪಣ್ಣ ಕಲ್ಲೂರು, ಭೀಮನಗೌಡ, ವೀರನಗೌಡ ಪೋ.ಪಾ., ಪಂಚಯ್ಯಸ್ವಾಮಿ ಬಿದ್ನೂರು ಮಠ, ಜಡಿಯಪ್ಪ ಮುಕ್ಕುಂದಿ, ವೀರೇಶ ನಾಗವಂಶಿ, ನಿಂಗಪ್ಪ ನಾಯಕ, ಮರಿರಾಜ್ ಭಜಂತ್ರಿ, ಸಿದ್ರಾಮಗೌಡ ಉಪ್ಪಳ, ಶಿವರೆಡ್ಡಿ ಖ್ಯಾಡೆದ್ ಇತರರಿದ್ದರು.

ಜಾತ್ರಾ ವ್ಯವಸ್ಥೆಗೆ ಮೆಚ್ಚುಗೆ

ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನ ಆಡಳಿತ ಮಂಡಳಿ ಮಾಡಿದ್ದ ಲೈಟಿಂಗ್, ಗರುಡ ಪ್ರಸಾದ, ಹೆಚ್ಚಿನ ರೀತಿಯಲ್ಲಿ ಹೂವಿನ ಅಲಂಕಾರ ವ್ಯವಸ್ಥೆಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಸುಬುಧೇಂದ್ರ ತೀರ್ಥರ ಭೇಟಿ

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶನಿವಾರ ನವಲಿಯ ಶ್ರೀ ಭೋಗಾಪುರೇಶ ಸ್ವಾಮಿಯ ದರ್ಶನ ಪಡೆದು ಬಳಿಕ ರಥೋತ್ಸವದಲ್ಲಿ ಭಾಗವಹಿಸಿದರು.

ನವಲಿಯ ಶ್ರೀ ಭೋಗಾಪುರೇಶ ದೇವಸ್ಥಾನಕ್ಕೆ ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಶ್ರೀಸ್ವಾಮಿ ದರ್ಶನ ಪಡೆದರು.