ಕನಕಗಿರಿ: ಪಟ್ಟಣದ ನವಲಿ ರಸ್ತೆಯಲ್ಲಿ ವಿಲೇವಾರಿ ಮಾಡಿದ್ದ ಮಾಂಸದಂಗಡಿಯ ತ್ಯಾಜ್ಯವನ್ನು ಪಪಂನಿಂದ ಸೋಮವಾರ ತೆರವು ಮಾಡಲಾಯಿತು.
ನಗರದ ಮಾಂಸದಂಗಡಿ ವ್ಯಾಪಾರಿಗಳು ಅಂಗಡಿಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ, ರಸ್ತೆಗಳ ಇಕ್ಕೆಲಗಳಲ್ಲಿ ಹಾಕುತ್ತಿದ್ದಾರೆ. ಇದು ದುರ್ವಾಸನೆ ಬೀರುತ್ತಿದ್ದು, ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಈ ಹಿಂದೆ ಪಪಂನಿಂದ ಸೂಚನೆ ನೀಡಿದ್ದರೂ ವ್ಯಾಪಾರಸ್ಥರು ಹಳೇ ಚಾಳಿ ಮುಂದುವರಿಸಿದ್ದರು.
ಈ ಕುರಿತು ಆ.3ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಎಚ್ಚೆತ್ತ ಪಪಂ ನವಲಿ ರಸ್ತೆಯ ತ್ಯಾಜ್ಯ ತೆರವು ಮಾಡಿದ್ದು, ಮಾಂಸದಂಗಡಿಗಳಿಗೆ ನೋಟಿಸ್ ನೀಡುವುದಾಗಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ತಿಳಿಸಿದ್ದಾರೆ.