ಕನಕಗಿರಿ ತಾಲೂಕಿನ ಕನಕಾಪುರದಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಹುಲಿಹೈದರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ಮಾಳಗಿ, ತಾಂತ್ರಿಕ ಅಧಿಕಾರಿ ಶಿವಪ್ಪರ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಮರಿಯಪ್ಪ ಹುಗ್ಗಿ, ಹನುಮಂತ, ಶೇಖರಪ್ಪ, ಸಿದ್ದಪ್ಪ ಬಪ್ಪೂರು ಇತರರಿದ್ದರು.  
ಜಿಲ್ಲೆ

ನೈಸರ್ಗಿಕ ಪದ್ಧತಿ ಅಳವಡಿಸಿಕೊಳ್ಳಿ, ಕೃಷಿ ಅಧಿಕಾರಿ ಶಿವಾನಂದ ಮಾಳಗಿ ಸಲಹೆ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಪೂರ್ವಜರಂತೆ ಕೃಷಿಯಲ್ಲಿ ನೈಸರ್ಗಿಕ ಪದ್ಧತಿ ಅಳವಡಿಸಿಕೊಂಡು ಬೇಸಾಯ ಮಾಡಿದರೆ ರೈತರು ಯಶಸ್ವಿಯಾಗಲು ಸಾಧ್ಯ ಎಂದು ಹುಲಿಹೈದರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ಮಾಳಗಿ ಹೇಳಿದರು.

ತಾಲೂಕಿನ ಗೌರಿಪುರ ಹಾಗೂ ಕನಕಾಪುರದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಮತ್ತು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ (ಎನ್‌ಎಂಎನ್‌ಎಫ್) ಗುರುವಾರ ಹಮ್ಮಿಕೊಂಡಿದ್ದ ರೈತರಿಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರ, ಕಂಪನಿಗಳನ್ನು ಅವಲಂಬಿಸಿದ್ದಾರೆ. ಹಿಂದೆ ರೈತರು ಬಿತ್ತನೆಗಾಗಿ ತಾವು ಬೆಳೆದ ಫಸಲಿನಲ್ಲಿ ಬೀಜಕ್ಕಾಗಿ ಉಳಿಸಿಕೊಂಡು ಬಿತ್ತನೆ ಮಾಡುತ್ತಿದ್ದರು. ಅದರಂತೆ ಕೃಷಿಕರು ಸ್ವಾವಲಂಬಿಗಳಾಗಿ ಬಿತ್ತನೆಗಾಗಿ ಬೀಜಗಳ ತಯಾರಿ ಮಾಡಿಕೊಳ್ಳಬೇಕು. ಬೆಳೆಗಳಿಗೆ ರೋಗ ಕಾಣಿಸಿಕೊಂಡಾಗ ಕೀಟನಾಶಕ ಬದಲಾಗಿ ಜೀವಾಮೃತ ಬಳಸಬೇಕು.

ರಸಗೊಬ್ಬರ ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡುವ ಬದಲು ತಿಪ್ಪೆಗೊಬ್ಬರ, ಸಾವಯವ ಗೊಬ್ಬರ ಬಳಸಿದಲ್ಲಿ ಖರ್ಚು ಕಡಿಮೆಯಾಗಿ ಆದಾಯ ಹೆಚ್ಚಾಗಲಿದೆ ಎಂದರು. ನಂತರ ಬೀಜೋಪಚಾರದ ಪ್ರಾತ್ಯಕ್ಷಿಕೆ ತೋರಿಸಲಾಯಿತು.

ತಾಂತ್ರಿಕ ಅಧಿಕಾರಿ ಶಿವಪ್ಪ, ಸಂಜೀವಿನಿ ಸಿಬ್ಬಂದಿ ಬಸವರಾಜ ನವಲಳ್ಳಿ, ಪ್ರಮುಖರಾದ ಮರಿಯಪ್ಪ ಹುಗ್ಗಿ, ಹನುಮಂತ, ಶೇಖರಪ್ಪ, ಸಿದ್ದಪ್ಪ ಬಪ್ಪೂರು ಇತರರಿದ್ದರು.