ಕನಕಗಿರಿ ಚೆನ್ನಶ್ರೀ ರುದ್ರ ಕಾಲೇಜಿನಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಉದ್ಘಾಟಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ, ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ಟರ್, ತಹಸೀಲ್ದಾರ್ ವಿಶ್ವನಾಥ ಮುರುಡಿ ಇತರರಿದ್ದರು. 
ಜಿಲ್ಲೆ

ಕಾನೂನು ಅರಿವು ಎಲ್ಲರಿಗೂ ಅಗತ್ಯ

ಕನಕಗಿರಿ: ಕಾನೂನಿನ ಅರಿವಿದ್ದರೆ ಭಯ ಪಡುವ ಅವಶ್ಯಕತೆ ಇಲ್ಲ. ಆದರೆ, ತಪ್ಪು ಮಾಡಿ ನನಗೆ ಕಾನೂನು ತಿಳಿದಿಲ್ಲ ಎಂದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗಂಗಾವತಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.

ಇಲ್ಲಿನ ಶ್ರೀ ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಚೆನ್ನಶ್ರೀ ರುದ್ರ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಗಂಗಾವತಿ ಹಾಗೂ ನಾನಾ ಇಲಾಖೆಗಳ ಸಹಯೋಗದಲ್ಲಿ ಕಾನೂನು ಸೇವಾ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನದ ಅನುಚ್ಛೇದ 39(ಎ) ಅಡಿಯಲ್ಲಿ ಎಲ್ಲರಿಗೂ ಉಚಿತವಾಗಿ ಕಾನೂನು ಅರಿವು ಮೂಡಿಸಲಾಗುತ್ತಿದೆ. ಸಮಾಜದಲ್ಲಿ ಜೀವಿಸುತ್ತಿರುವ ನಾವುಗಳು ಭಾರತದ ಸಂವಿಧಾನ ಹಾಗೂ ಕಾನೂನನ್ನು ತಿಳಿದುಕೊಳ್ಳಬೇಕು ಎಂದರು.

ಕಾನೂನು ಸೇವೆಗಳ ಸಮಿತಿ ತಾಲೂಕು ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಮಾತನಾಡಿ, ದೇಶದ ಎಲ್ಲ ಪ್ರಜೆಗಳಿಗೂ ಒಂದೇ ಕಾನೂನು. ಅನ್ಯಾಯಕ್ಕೊಳಗಾದ ಆರ್ಥಿಕ ದುರ್ಬಲರಿಗೆ 1995 ನ.9ರಂದು ಜಾರಿಯಾಗಿರುವ ಕಾನೂನು ಪ್ರಾಧಿಕಾರ ಅಧಿನಿಯಮದಡಿ ಉಚಿತವಾಗಿ ಕಾನೂನು ನೆರವು ನೀಡಲಾಗುವುದು. 3 ಲಕ್ಷ ಕ್ಕಿಂತ ಕಡಿಮೆ ಆದಾಯ ಇರುವ ಪರಿಶಿಷ್ಟ ಜನಾಂಗದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ, ಜಿಲ್ಲೆ, ತಾಲೂಕುಗಳ ಮಟ್ಟದಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಸಹಾಯ ಮಾಡುತ್ತಿವೆ ಎಂದರು.

16ರಿಂದ 18 ಮಾನಸಿಕ ಹಾಗೂ ದೈಹಿಕ ಬದಲಾವಣೆಯ ವಯಸ್ಸು. ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಅನ್ಯ ವಿಚಾರಗಳಿಗೆ ಕಿವಿಕೊಡದೆ ಶಿಕ್ಷಣಕ್ಕೆ ಹೆಚ್ಚಿನ ಒಲವು ತೋರಿಸಬೇಕು. ಈ ಹಂತಲ್ಲಿ ತಪ್ಪೆಸಗಿದರೆ, ಪೋಕ್ಸೋ ಕಾಯ್ದೆಗೆ ತುತ್ತಾಗಬೇಕಾಗುತ್ತದೆ. ಪೋಕ್ಸೋ ರಕ್ಷಣೆಗಾಗಿ ಇದ್ದು, ಪ್ರಕರಣ ದಾಖಲಾಗಿ, ಕಾಯ್ದೆಯಡಿ ಸಾಕ್ಷಿಗಳು ದೃಢವಾದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಕ್ಕಳು ಯೋಗ, ಪ್ರೊಟೀನ್ ಆಹಾರ ಸೇವನಗೆ ಆದ್ಯತೆ ನೀಡಿ. 18 ವರ್ಷದೊಳಗಿನ ಮಕ್ಕಳು ದ್ವಿಚಕ್ರ ವಾಹನ ಚಲಾಯಿಸುವುದು ಅಪರಾಧವಾಗುತ್ತದೆ ಎಂದು ಮಾಹಿತಿ ನೀಡಿದರು.

ವಕೀಲರಾದ ವಿ.ಎನ್.ಪಾಟೀಲ್ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ಟರ್, ತಹಸೀಲ್ದಾರ್ ವಿಶ್ವನಾಥ ಮುರುಡಿ, ಪಿಐ ಎಂ.ಡಿ.ಫೈಜುಲ್ಲಾ, ಕಾರ್ಯದರ್ಶಿ ಪ್ರಶಾಂತ ಪ್ರಭುಶೆಟ್ಟರ್, ವಾಗೇಶ ಹಿರೇಮಠ, ಮುಖ್ಯ ಶಿಕ್ಷಕಿಯರಾದ ಮಂಗಳಾ ಸಜ್ಜನ್, ಶಶಿಕಲಾ, ಪ್ರಾಚಾರ್ಯ ನಿರೂಪಾದಿ ಇದ್ದರು.

ಪಹಣಿಯಲ್ಲಿ ಏನೇನೋ ಸೇರಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಪಾಲಕರ ಹೆಸರಿನ ಪಹಣಿ ಯನ್ನು ಆಗಾಗ್ಗೆ ಪರಿಶೀಲನೆ ನಡೆಸಬೇಕು. ಏನಾದರು ಕಂಡುಬಂದಲ್ಲಿ ತಿಳಿಸಬೇಕು. | ರಮೇಶ ಗಾಣಿಗೇರ ಗಂಗಾವತಿಯ ಹಿರಿಯ ಸಿವಿಲ್ ನ್ಯಾಯಾಧೀಶ