ಕನಕಗಿರಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಕನಕಗಿರಿ ತಾಲೂಕು ಪ್ರಗತಿಪರ ಸಂಘಟನೆ ಬುಧವಾರ ಮನವಿ ಸಲ್ಲಿಸಿತು. ಪಪಂ ಸದಸ್ಯ ಶೇಷಪ್ಪ ಪೂಜಾರಿ, ನಿಂಗಪ್ಪ ಪೂಜಾರಿ, ನೂರಸಾಬ್, ಹೊನ್ನೂರಪಾಷಾ, ಸುರೇಶ ಕುರಗೋಡು, ಅಹ್ಮದ್ ಮೇಸ್ತ್ರಿ, ದುರ್ಗಪ್ಪ ಕಲಕೇರಿ ಇತರರಿದ್ದರು.  
ಜಿಲ್ಲೆ

ವಕೀಲ ಕೃತ್ಯ ನ್ಯಾಯಾಂಗ ವ್ಯವಸ್ಥೆಗೆ ಅವಮಾನ, ಕನಕಗಿರಿಯಲ್ಲಿ ಪ್ರಗತಿಪರ ಸಂಘಟನೆ ಆಕ್ರೋಶ

ಕನಕಗಿರಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಶೂ ಎಸೆಯಲು ಯತ್ನಿಸಿದ ವಕೀಲ ಡಾ. ರಾಕೇಶ ಕಿಶೋರ ಹಾಗೂ ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನ ಮಾಡಿರುವ ಮಧ್ಯ ಪ್ರದೇಶದ ವಕೀಲ ಅಮಿತ್ ಮಿಶ್ರಾ ವಿರುದ್ಧ ಕಾನೂನು ಕ್ರಮ ವಹಿಸಲು ಆಗ್ರಹಿಸಿ ತಾಲೂಕು ಪ್ರಗತಿಪರ ಸಂಘಟನೆ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಬುಧವಾರ ಮನವಿ ಸಲ್ಲಿಸಿತು.

ಸಂಘಟನೆಯ ಸಂಚಾಲಕ ಪಾಮಣ್ಣ ಅರಳಿಗನೂರು ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಕೋರ್ಟ್ ಎತ್ತರ ಸ್ಥಾನದಲ್ಲಿದೆ. ಅಂತಹ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್. ಗವಾಯಿಯವರು ಕೋರ್ಟ್ ಕಲಾಪ ನಡೆಯುತ್ತಿರುವಾಗಲೇ ಮನುವಾದಿ ವಕೀಲ ಡಾ. ರಾಕೇಶ ಕಿಶೋರ ಜಡ್ಜ್‌ರತ್ತ ಶೂ ಎಸೆಯಲು ಯತ್ನಿಸಿರುವುದು ಇಡೀ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ದೇಶದ ನ್ಯಾಯಾಂಗ ವ್ಯವಸ್ಥೆಗೆ, ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಈ ಘಟನೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗಿದೆ. ತಮ್ಮತ್ತ ಶೂ ಎಸೆಯಲು ಯತ್ನಿಸಿದರೂ ಮಾನವೀಯತೆ ಆಧಾರದಲ್ಲಿ ಮಾನ್ಯ ನ್ಯಾಯಾಧೀಶರು ಕ್ರಮ ವಹಿಸದಿರಲು ಸೂಚಿಸಿದ್ದು, ಅದರಂತೆ ವಕೀಲನನ್ನು ಬಿಡುಗಡೆಗೊಳಿಸಲಾಗಿದೆ. ಆದರೆ, ಸದರಿ ವಕೀಲ ಮಾತ್ರ ಕ್ಷಮೆ ಕೇಳದೆ ಉದ್ಧಟತನದ ಮಾತನಾಡುತ್ತಿದ್ದಾರೆ.

ಇನ್ನು ಮಧ್ಯಪ್ರದೇಶದ ಗ್ವಾಲಿಯರ ಕೋರ್ಟ್‌ನ ವಕೀಲ ಅಮಿತ್ ಮಿಶ್ರಾ ಅಂಬೇಡ್ಕರ್ ಕೊಳಕು ಮನುಷ್ಯ, ಸುಳ್ಳುಗಾರ, ಬ್ರಿಟೀಷರ ಏಜೆಂಟ್, ಸವರ್ಣಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಅಂಬೇಡ್ಕರ್ ಕಾರಣ. ಅದಕ್ಕಾಗಿ ಗ್ವಾಲಿಯರ್ ಹೈ ಕೋರ್ಟ್ ಮುಂದೆ ಅಂಬೇಡ್ಕರ್ ಪ್ರತಿಮೆ ತೆಗೆದು ಬಿ.ಎನ್. ರಾವ್ ಅವರ ಪ್ರತಿಮೆ ಸ್ಥಾಪಿಸುತ್ತೇವೆ ಎಂಬುದುದಾಗಿ ಹೇಳಿಕೆ ನೀಡಿದ್ದಾರೆ. ಈ ಇಬ್ಬರು ಸಂವಿಧಾನ, ಅಂಬೇಡ್ಕರ್ ವಿರೋಧಿ ಮನಸ್ಥಿತಿಯುಳ್ಳವರಾಗಿದ್ದು, ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪಪಂ ಸದಸ್ಯ ಶೇಷಪ್ಪ ಪೂಜಾರಿ, ನಿಂಗಪ್ಪ ಪೂಜಾರಿ, ನೂರಸಾಬ್, ಹೊನ್ನೂರ ಪಾಷಾ, ಸುರೇಶ ಕುರಗೋಡು, ಅಹ್ಮದ್ ಮೇಸ್ತ್ರಿ, ದುರ್ಗಪ್ಪ ಕಲಕೇರಿ, ಚಂದ್ರಶೇಖರ ಸೂಡಿ, ನಾಗೇಶ ಬಡಿಗೇರ, ಚಂದುಸಾಬ ಗುರಿಕಾರ, ಸಣ್ಣ ಹನುಮಂತಪ್ಪ, ಸಣ್ಣ ದುರ್ಗಪ್ಪ ಇತರರಿದ್ದರು.