ಜಿಲ್ಲೆ

ಕನಕಾಪುರದಲ್ಲಿ ಒಡೆದ ಜೆಜೆಎಂ ಪೈಪ್‌ಲೈನ್; ಹಸ್ತಾಂತರಕ್ಕೂ ಮೊದಲೇ ಸೋರಿಕೆ, ಕಳಪೆ ಆರೋಪ

ಕನಕಗಿರಿ: ಹುಲಿಹೈದರ್ ಗ್ರಾಪಂ ವ್ಯಾಪ್ತಿಯ ಕನಕಾಪುರದಲ್ಲಿ ಜೆಜೆಎಂ ಯೋಜನೆಯಡಿ ಅಳವಡಿಸಿದ ಪೈಪ್‌ಲೈನ್ ಎಲ್ಲೆಂದರಲ್ಲಿ ಒಡೆದಿದ್ದು, ರಸ್ತೆಯಲ್ಲಿ ನೀರು ಸಂಗ್ರಹವಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.

ಗ್ರಾಮದಲ್ಲಿ 250 ಮನೆಗಳಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಗಳನ್ನು ಅಳವಡಿಸಲಾಗಿದೆ. ಗ್ರಾಮಕ್ಕೆ ಮೊದಲಿಂದಲೂ ಕುಡಿವ ನೀರಿನ ಸಮಸ್ಯೆ ಕಾಡುತ್ತಿತ್ತು. ಈ ನಿಟ್ಟಿನಲ್ಲಿ ಬಸರಿಹಾಳ ಹಾಗೂ ಕನಕಾಪುರ ಹತ್ತಿರ ಹಾದು ಹೋಗಿರುವ ಲಿಂಗಸಗೂರು-ಗಂಗಾವತಿ ರಾಜ್ಯ ಹೆದ್ದಾರಿ ಬಳಿಯಿರುವ ಬೋರ್‌ವೆಲ್‌ನಿಂದ ಜೆಜೆಎಂ ಯೋಜನೆಯ ಪೈಪ್‌ಲೈನ್ ಸಂಪರ್ಕಿಸಿ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಗ್ರಾಮದಲ್ಲಿ ಅಳವಡಿಸಿರುವ ಜೆಜೆಎಂ ಪೈಪ್‌ಲೈನ್ ಒಡೆದಿದೆ. ಅಲ್ಲದೆ, ಬಸರಿಹಾಳ ಗ್ರಾಮದಿಂದ ಸರಬರಾಜಾಗುವ ನೀರು ಕುಡಿದು ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇನ್ನೂ ಪೈಪ್‌ಲೈನ್ ಒಡೆದು ನೀರು ಸೋರಿಕೆಯಾಗಿ ಕೊಳಚೆ ಸೇರಿಕೊಂಡು ನಿವಾಸಿಗಳು ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕುಡಿವ ನೀರು ಸರಬರಾಜು ಮಾಡುವ ಜೆಜೆಎಂ ಯೋಜನೆಯ ಮೇಲ್ವಿಚಾರಣೆ ನಮ್ಮದಾಗಿದ್ದು, ಸಂಬಂದಿಸಿದವರ ಗಮನಕ್ಕೆ ತಂದು ಸರಿಪಡಿಸಲಾಗುವುದು.| ಚಂದ್ರಶೇಖರ ಕಂದಕೂರು ತಾಪಂ ಇಒ, ಕನಕಗಿರಿ
ಕನಕಾಪುರದಲ್ಲಿ ಜೆಜೆಎಂ ಕಾಮಗಾರಿ ಮಾಡಿದ ಗುತ್ತಿಗೆದಾರರು ಗ್ರಾಪಂಗೆ ಹಸ್ತಾಂತರಿಸಿಲ್ಲ. ಅಲ್ಲದೆ, ಕಾಮಗಾರಿ ಬಿಲ್ ಪಾವತಿಯಾಗಿಲ್ಲ. ಗುತ್ತಿಗೆದಾರರಿಗೆ ಸರಿಪಡಿಸಲು ಸೂಚಿಸಲಾಗುವುದು.| ಸತೀಶ್ ಎಇಇ, ಗ್ರಾಮೀಣ ಕುಡಿವ ನೀರು ಯೋಜನೆ