ಜಿಲ್ಲೆ

ಮೂರನೇ ದಿನವೂ ಮುಂದುವರೆದ ದಾಸೋಹ

ಕನಕಗಿರಿ: ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧ ಕನಕಾಚಲಪತಿ ಜಾತ್ರಾ ಮಹೋತ್ಸವದಲ್ಲಿ ಮೊದಲ ಬಾರಿಗೆ ಮೂರನೇ ದಿನವಾದ ಶನಿವಾರ ಭಕ್ತರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಲಾಯಿತು.

ಪ್ರತಿ ವರ್ಷದ ಜಾತ್ರೆಯಲ್ಲಿ ಗರುಡೋತ್ಸವ ಹಾಗೂ ರಥೋತ್ಸವ ದಿನ ಮಾತ್ರ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷದ ಜಾತ್ರೆಯಲ್ಲಿ ರಥೋತ್ಸವದ ಮರುದಿನವೂ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುವುದರಿಂದ ಯಾವುದೇ ರೀತಿಯಲ್ಲಿ ಊಟಕ್ಕೆ ಕೊರತೆಯಾಗಬಾರದು ಎನ್ನುವ ನಿಟ್ಟಿನಲ್ಲಿ ರಥೋತ್ಸವದ ಮರುದಿನವಾದ ಶನಿವಾರ ಸಹ ದಾಸೋಹವನ್ನು ಮುಂದುವರಿಸಲಾಯಿತು. ಹುಗ್ಗಿ, ಅನ್ನ ಸಾಂಬಾರ್, ರೊಟ್ಟಿ, ಬದನೆಕಾಯಿ ಪಲ್ಲೆಯನ್ನು ಭಕ್ತರು ಸವಿದರು.

ಮುಂದಿನ ವರ್ಷವೂ ಸಹ ಮೂರು ದಿನಗಳ ಕಾಲ ಪ್ರಸಾದ ವ್ಯವಸ್ಥೆಯನ್ನು ಮುಂದುವರಿಸುವ ಯೋಚನೆಯಿದೆ ಎಂದು ದಾಸೋಹ ನಿರ್ವಹಣೆ ಹೊತ್ತ ಕೀರ್ತಿ ಸೋನಿ, ಸುದರ್ಶನರೆಡ್ಡಿ, ನಾಗೇಶ, ಶೇಖರಪ್ಪ ಬಾವಿಕಟ್ಟಿ ಇತರರು ತಿಳಿಸಿದರು.

ಸೇವೆ ಸಲ್ಲಿಸಿದ ಪೊಲೀಸರ ಶ್ಲಾಘನೆ: ಗರುಡೋತ್ಸವ ಹಾಗೂ ರಥೋತ್ಸವ ದಿನಗಳಂದು ದಾಸೋಹ ವ್ಯವಸ್ಥೆ ಇರುವಲ್ಲಿ ನಿಯೋಜಿಸಲಾಗಿದ್ದ ಪೊಲೀಸರು ಕರ್ತವ್ಯದ ಜತೆಗೆ ದಾಸೋಹದಲ್ಲಿ ಸೇವೆ ಸಲ್ಲಿಸಿ ದಾಸೋಹ ಸಮಿತಿಯವರ ಮೆಚ್ಚುಗೆಗೆ ಪಾತ್ರರಾದರು.