ಕನಕಗಿರಿ: ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡುವುದು, ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಹಾಗೂ ಕೃಷಿ ಮಾಡುತ್ತಿರುವ ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಐಯರ್ಲಾ ಸಂಘಟನೆಯಿಂದ ರಾಜ್ಯಾದ್ಯಂತ ಆರಂಭಿಸಿರುವ ಜನಜಾಗೃತಿ ಜಾಥಾದ ಪೋಸ್ಟರ್‌ಗಳನ್ನು ತಾಲೂಕಿನ ಹಿರೇಖೇಡದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಕೆಂಚಪ್ಪ ಹಿರೇಖೇಡ ಮಾತನಾಡಿ, ರೈತ, ಕೃಷಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಸೆ.10-23ರ ವರೆಗೆ ಐಯರ್ಲಾ ಸಂಘಟನೆಯಿಂದ ರಾಜ್ಯಾದ್ಯಂತ ಜನ ಜಾಗೃತಿ ಆಂದೋಲನ ನಡೆಯುತ್ತಿದೆ. ಸರ್ಕಾರವು ಫಾರಂ ನಂ.57 ಹಾಕಲು ಪುನಃ ಅವಕಾಶ ಕಲ್ಪಿಸಬೇಕು. ಪ್ರತಿ ಗ್ರಾಮವಾರು ಸರ್ವೇ ನಡೆಸಿ, ಮನೆ, ನಿವೇಶನ ಇಲ್ಲದವರಿಗೆ ಆಶ್ರಯ, ಭೂಮಿ ಇಲ್ಲದವರಿಗೆ ಜಮೀನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಣ್ಣ ಹನುಮಂತ ಹುಲಿಹೈದರ ಮಾತನಾಡಿ, ಉದ್ಯೋಗ ಖಾತ್ರಿಯಡಿ ಮಾನವ ದಿನಗಳನ್ನು 200 ದಿನಗಳಾಗಿ ಪರಿವರ್ತಿಸಿ, ಕೂಲಿ ದರವನ್ನು 600 ರೂ.ಗೆ ಹೆಚ್ಚಿಸಬೇಕು. ತಾಲೂಕಿನ ಹಿರೇಖೇಡ ಗ್ರಾಮದ ಸರ್ವೇ ನಂ.25 ಮತ್ತು 26ರಲ್ಲಿ ದಲಿತರು ಜೀವನೋಪಾಯಕ್ಕಾಗಿ ಹಲವು ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿದ್ದಾರೆ. ಆದರೆ, ಸರ್ಕಾರ ಈ ರೈತರ ವಿರುದ್ಧ ಭೂಕಬಳಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ. ಈ ಕಾರಣಕ್ಕಾಗಿ ದಲಿತರು ಉಳುಮೆ ಮಾಡುತ್ತಿರುವ ಇಂಥಹ ಜಮೀನಿನಲ್ಲಿಯೇ ನಮ್ಮ ಹೋರಾಟದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.