ಕನಕಗಿರಿಯ ಎಪಿಎಂಸಿ ಟೆಂಡರ್ ಹಾಲ್‌ನಲ್ಲಿ ಶನಿವಾರ ನಡೆದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದಲ್ಲಿ ಆರೆಸ್ಸೆಸ್ ಉತ್ತರ ಕರ್ನಾಟಕ ಪ್ರಾಂತ ಸಹ ಕಾರ್ಯವಾಹ ಪ್ರಸನ್ನ ಮಾತನಾಡಿದರು.  
ಜಿಲ್ಲೆ

ಮನೆ ಮನೆಗೆ ತಲುಪಲಿ ರಾಮ ಮಂದಿರ ನಿರ್ಮಾಣ ವಿಷಯ

ಕನಕಗಿರಿ: ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸುವುದು ಉದ್ದೇಶವಲ್ಲ, ಮನೆ ಮನೆಗೆ ಮಂದಿರ ನಿರ್ಮಾಣದ ವಿಷಯ ತಲುಪಿಸುವುದು ಪ್ರಮುಖ ಉದ್ದೇಶ ಎಂದು ಆರೆಸ್ಸೆಸ್ ಉತ್ತರ ಕರ್ನಾಟಕ ಪ್ರಾಂತ ಸಹ ಕಾರ್ಯವಾಹ ಪ್ರಸನ್ನ ಹೇಳಿದರು.

ಪಟ್ಟಣದ ಎಪಿಎಂಸಿಯಲ್ಲಿನ ಟೆಂಡರ್ ಹಾಲ್‌ನಲ್ಲಿ ಶನಿವಾರ ನಡೆದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದಲ್ಲಿ ಮಾತನಾಡಿದರು. ಶ್ರೀರಾಮ ಇತಿಹಾಸ ಪುರುಷನಾಗಿದ್ದು, ಭರತ ಖಂಡಕ್ಕೆ ರಾಮನ ಕೊಡುಗೆ ಅಪಾರವಾಗಿದೆ. ಇಂತಹ ರಾಮನ ಹುಟ್ಟಿದ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್‌ನ ಅನುಮತಿ ದೊರೆತಿದೆ. ಅದಕ್ಕಾಗಿ ಪ್ರತಿ ಗ್ರಾಮದ ಮನೆ ಮನದಿಂದ ಕೈಲಾದ ನಿಧಿ ಸಂಗ್ರಹಕ್ಕೆ ದೇಶದಾದ್ಯಂತ ಆರೆಸ್ಸೆಸ್ ಸಮ್ಮುಖದಲ್ಲಿ ಹಲವು ಸಂಘಟನೆಗಳು ಕೆಲಸ ಮಾಡುತ್ತಿವೆ. ಮುಸ್ಲಿಂರಿಂದಲೂ ಮಂದಿರಕ್ಕೆ ಸಹಕಾರ ದೊರೆಯುತ್ತಿದೆ. ಇದೊಂದು ಸಾಮರಸ್ಯದ ಮಂದಿರವಾಗಲಿದೆ. ದೇಶದ 4 ಲಕ್ಷ ಗ್ರಾಮಗಳನ್ನು ತಲುಪಿ ರಾಮ ಮಂದಿರ ನಿರ್ಮಾಣ ವಿಷಯವನ್ನು ತಲುಪಿಸಿ, ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದರು.

ಆರೆಸ್ಸೆಸ್ ಪ್ರಮುಖರಾದ ಸುರೇಶ ಸಮಗಂಡಿ, ಅಯ್ಯನಗೌಡ ಹೇರೂರು, ಜಗದೀಶ ಆಚಾರ್ಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ದೇಸಾಯಿ, ಬಿಜೆಪಿ ಕನಕಗಿರಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಎಸ್‌ಟಿ ಮೋರ್ಚಾ ಅಧ್ಯಕ್ಷ ನಾಗರಾಜ ಇದ್ಲಾಪುರ, ಶಕ್ತಿ ಕೇಂದ್ರದ ಅಧ್ಯಕ್ಷ ರಂಗಪ್ಪ ಕೊರಗಟಗಿ ಇತರರಿದ್ದರು.