ಕನಕಗಿರಿಯಲ್ಲಿ ಶಿರಸ್ತೇದಾರ್ ಅನಿತಾ ಇಂಡಿಗೆ ಎಸ್‌ಎಫ್‌ಐ ತಾಲೂಕು ಘಟಕ ಮನವಿ ಸಲ್ಲಿಸಿತು. ವಿದ್ಯಾರ್ಥಿಗಳಾದ ಅನಿತಾ, ರೇಖಾ, ರತ್ನಾ, ಶರಣಪ್ಪ ಇತರರಿದ್ದರು.  
ಜಿಲ್ಲೆ

ವಸತಿ ನಿಲಯಗಳ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಿ, ಎಸ್‌ಎಫ್‌ಐ ತಾಲೂಕು ಸಮಿತಿ ಒತ್ತಾಯ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಹಿಂದುಳಿದ ವರ್ಗಗಳ ವಸತಿ ನಿಲಯಗಳ ಆಯ್ಕೆಪಟ್ಟಿ ಬಿಡುಗಡೆಗೊಳಿಸಲು ಒತ್ತಾಯಿಸಿ ಎಸ್‌ಎಫ್‌ಐ ತಾಲೂಕು ಸಮಿತಿ ಪಟ್ಟಣದಲ್ಲಿ ತಹಸಿಲ್ ಕಚೇರಿ ಶಿರಸ್ತೇದಾರ್ ಅನಿತಾ ಇಂಡಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ತಾಲೂಕು ಸಮಿತಿ ಕಾರ್ಯದರ್ಶಿ ಶಿವಕುಮಾರ್ ಈಚನಾಳ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ತರಗತಿಗಳು ಆರಂಭವಾಗಿ ಸುಮಾರು ಒಂದುವರೆ ತಿಂಗಳಾಗಿದೆ. ಆದರೆ, ಇದುವರೆಗೂ ಹಾಸ್ಟೆಲ್ ಆಯ್ಕೆಪಟ್ಟಿ ಬಿಡುಗಡೆ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಿವಾರ್ಯವಾಗಿ ವಿದ್ಯಾರ್ಥಿಗಳು ಮನೆಯಿಂದ ಪ್ರತಿನಿತ್ಯ ಶಾಲೆಗೆ ಬಸ್‌ನಲ್ಲಿ ಸಂಚರಿಸಿ ತರಗತಿಗಳಿಗೆ ಹಾಜರಾಗಬೇಕಿದೆ. ಇದರಿಂದ ಸಮಯದ ಜತೆಗೆ ಹಣವೂ ವ್ಯರ್ಥವಾಗುತ್ತದೆ. ಬಸ್ ಸೌಲಭ್ಯವಿದ್ದವರು ಸಂಚರಿಸುತ್ತಾರೆ. ಆದರೆ, ಕೆಲ ಗ್ರಾಮಗಳಿಗೆ ಬಸ್ ಸಂಪರ್ಕವೇ ಇಲ್ಲ. ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಆಯ್ಕೆ ಸಮಿತಿಯ ಅಧ್ಯಕ್ಷರು ಶಾಸಕರು ಆಗಿರುವುದರಿಂದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬ ಮಾಡಬಾರದು.

ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಮಿತಿಯ ತಾಲೂಕು ಅಧ್ಯಕ್ಷ ಹನುಮೇಶ್ ಮ್ಯಾಗಡೆ, ವಿದ್ಯಾರ್ಥಿಗಳಾದ ಅನಿತಾ, ರೇಖಾ, ರತ್ನಾ, ಶರಣಪ್ಪ ಇತರರಿದ್ದರು.