ಹಿರೇಖೇಡ ನ್ಯಾಯಬೆಲೆ ಅಂಗಡಿಯ ಹಾಲಿ ಹಂಚಿಕೆದಾರನನ್ನು ಸೇವೆಯಿಂದ ಮುಂದುವರಿಸುವಂತೆ ಆಗ್ರಹಿಸಿ ಹಿರೇಖೇಡ, ಮಲ್ಲಿಗೆವಾಡ, ಚಿಕ್ಕಖೇಡ ಗ್ರಾಮಸ್ಥರು ಕನಕಗಿರಿ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಬುಧವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಪರಶುರಾಮ, ಹನುಮಂತಪ್ಪ, ಸಿದ್ದಯ್ಯ, ಈಶಪ್ಪ ಹೊಸಕೇರಿ, ವಿರುಪಣ್ಣ ಹೊಸಕೇರಿ, ಸ್ವಾಮಿ ಡಂಕನಕಲ್ ಇತರರಿದ್ದರು.  
ಜಿಲ್ಲೆ

ಪಡಿತರ ಹಂಚಿಕೆದಾರನ ಮುಂದುವರಿಸಿ

ಕನಕಗಿರಿ: ತಾಲೂಕಿನ ಹಿರೇಖೇಡ ನ್ಯಾಯಬೆಲೆ ಅಂಗಡಿ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಮತ್ತೊಂದು ಗುಂಪು ಹಂಚಿಕೆದಾರನ ಪರವಾಗಿ ನಿಂತಿದ್ದು, ಇವರನ್ನೇ ಮುಂದುವರಿಸುವಂತೆ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮಂಗಳವಾರ ಮನವಿ ಸಲ್ಲಿಸಿದೆ.

ಗ್ರಾಮದ ಮುಖಂಡ ಬಾರಿಮರದಪ್ಪ ಮಾತನಾಡಿ, ಹಿರೇಖೇಡ ನ್ಯಾಯಬೆಲೆ ಅಂಗಡಿಗೆ ಚಿಕ್ಕಖೇಡ ಹಾಗೂ ಮಲ್ಲಿಗೆವಾಡ ಮೂರು ಗ್ರಾಮಗಳ ಫಲಾನುಭವಿಗಳಿದ್ದಾರೆ. ವಿತರಕ ಹುಲಿಸ್ವಾಮಿ ಗಾಣದಾಳ ಸಮರ್ಪಕ ಪಡಿತರ ವಿತರಿಸುತ್ತಿದ್ದು, ಪಡಿತರದಾರರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದಾರೆ. ಆದರೆ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಗುಂಪೊಂದು ವಿನಾಕಾರಣ ತೊಂದರೆ ನೀಡುತ್ತಿದೆ. ಇವರು ಯಾರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ. ಗುಂಪಿನ ಕಿರುಕುಳ ತಾಳದೆ ಹುಲಿಸ್ವಾಮಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾರೆ. ಆದರೆ, ಇವರ ವಿರೋಧಿ ಗುಂಪು ಪಡಿತರ ದಾಸ್ತಾನು ಗೋದಾಮಿಗೆ ಬೀಗ ಜಡಿದು ಧಾನ್ಯ ಹಂಚದಂತೆ ದೌರ್ಜನ್ಯ ನಡೆಸುತ್ತಿದೆ ಎಂದು ದೂರಿದೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತೊಂದರೆ ನೀಡುತ್ತಿರುವ ಗುಂಪಿನ ಮನವಿಯನ್ನು ಪುರಸ್ಕರಿಸದೇ ಪರಿಶೀಲನೆ ನಡೆಸಬೇಕು. ಈಗಿರುವ ಹಂಚಿಕೆದಾರರನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಪರಶುರಾಮ, ಹನುಮಂತಪ್ಪ, ಸಿದ್ದಯ್ಯ, ಈಶಪ್ಪ ಹೊಸಕೇರಿ, ವಿರುಪಣ್ಣ ಹೊಸಕೇರಿ, ಸ್ವಾಮಿ ಡಂಕನಕಲ್, ಹುಲಿಗೆಮ್ಮ ಕುಟಗಮರಿ, ರೇಣುಕಮ್ಮ ಮೈಲಾಪುರ, ಅಂಬಮ್ಮ ಹೊಸಕೇರಿ, ಹನುಮಮ್ಮ ಕುರುಬರ, ಬೀರಪ್ಪ ಕೆ, ಯಂಕಮ್ಮ, ಪಾರ್ವತೆಮ್ಮ, ಸಿದ್ದಮ್ಮ ಇತರರಿದ್ದರು.