ಕನಕಗಿರಿ: ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ದೇವರಿಗಿಂತ ಗುರುವಿಗೆ ಉನ್ನತ ಸ್ಥಾನವಿದ್ದು, ಗುರು ಎನಿಸಿಕೊಂಡವರು ಶಿಷ್ಯವೃಂದಕ್ಕೆ ಸನ್ಮಾರ್ಗ ತೋರಿದಾಗ ಮಾತ್ರ ಗುರುವಿನ ಮಹತ್ವ ಅರಿಯಲು ಸಾಧ್ಯ ಎಂದು ಹಿರಿಯ ಹಾರ್ಮೋನಿಯಂ ಕಲಾವಿದ ವಿರೂಪಾಕ್ಷರೆಡ್ಡಿ ಓಣಿಮನಿ ಹೇಳಿದರು.
ಪಟ್ಟಣದ ತೊಂಡಿತೇವರಪ್ಪ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಭಜನಾ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಗುರು ವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಕ್ಷರ ಕಲಿಸಿದಾತ ಮಾತ್ರ ಗುರುವಾಗಿರದೇ ಜೀವನದಲ್ಲಿ ನಾನಾ ಮಾರ್ಗದರ್ಶನ ಮಾಡುವುವವರೂ ಗುರುಗಳಾಗಿದ್ದಾರೆ. ಅಂಥ ಗುರುವಿನ ಸೇವೆ ಮಾಡಿದವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. ಅಧ್ಯಾತ್ಮ, ದಾಸ ಸಾಹಿತ್ಯ, ವಚನಗಳು ಓದುವುದಕ್ಕೆ ಸೀಮಿತವಾಗಿವೆ ಹೊರತು ಸಾಹಿತ್ಯದಲ್ಲಿ ಅಡಗಿರುವ ಅಭಿರುಚಿಯನ್ನು ಯುವ ಸಮೂಹ ಅರ್ಥೈಸಿಕೊಂಡು ಪರಿವರ್ತನೆಯೆಡೆ ಸಾಗಿ ಬದಕು ಹಸನಾಗಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ವಿಜಯಕುಮಾರ ಹೊಸಳ್ಳಿ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರ ವಾಣಿಯಂತೆ ನಮಗೆಲ್ಲರಿಗೂ ಗುರುವಿನ ಮೂಲಕ ವಿದ್ಯೆ, ಬುದ್ಧಿ ಪ್ರಾಪ್ತಿಯಾಗಲಿದೆ. ಗುರುವಿನ ಮಹತ್ವ ಎಲ್ಲರೂ ತಿಳಿದು ಜೀವನ ಪಾವನವಾಗಿಸಿಕೊಳ್ಳಬೇಕು ಎಂದರು.
ಸತತ 30 ವ?ರ್ಕ್ಕೂ ಹೆಚ್ಚು ಕಾಲ ಹಾರ್ಮೋನಿಯಂ ವಾದನ ಸೇವೆ ಸಲ್ಲಿಸಿದ ವಿರೂಪಾಕ್ಷರೆಡ್ಡಿ ಓಣಿಮನಿ, ತೊಂಡೆಪ್ಪ ಕುಂಡೆರ್, ಪರಂಧಾಮರೆಡ್ಡಿ ಭೀರಳ್ಳಿ ದಿಮ್ಮ ವಾದನದಲ್ಲಿ ಕಾಶಿಪತಿ ಕಮ್ಮಾರ್ ಹಾಗೂ ಹನುಮಂತರೆಡ್ಡಿ ಮಹಲಿನಮನಿ ಅವರಿಗೆ ಶ್ರೀಗುರು ಅನುಗ್ರಹ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಕಲಾವಿದರಾದ ಸುರೇಶ ಬೊಂದಾಡೆ, ಸುರೇಶರೆಡ್ಡಿ ಮಹಲಿನಮನಿ, ಭೀಮರೆಡ್ಡಿ ಓಣಿಮನಿ, ಶೇಖರಪ್ಪ ಕಮ್ಮಾರ, ಮೋಹನ ಅಚ್ಚಲಕರ, ರಾಘವೇಂದ್ರ ಚಿತ್ರಗಾರ, ಭೀಮರಾವ್ ಮರಾಠಿ, ವೀರೇಶ ವಸ್ತ್ರದ, ವಿನಯ ಪತ್ತಾರ, ಅಶೋಕ ನಾಯಕ, ಅರ್ಚಕರಾದ ಕಂಠೆಪ್ಪ, ರಾಮಣ್ಣ ಇತರರು ಇದ್ದರು.