ಕನಕಗಿರಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ನಡೆ ಖಂಡಿಸಿ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಮಳೆಯಲ್ಲೇ ಪ್ರತಿಭಟನೆ ನಡೆಸಿದರು.
ಬಳ್ಳಾರಿ ವಿಭಾಗೀಯ ಸಂಚಾಲಕ ಶಶಾಂಕ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ 432 ಪದವಿ ಕಾಲೇಜುಗಳಲ್ಲಿದ್ದ ಆರು ಸಾವಿರ ಕಾಯಂ ಉಪನ್ಯಾಸಕರಲ್ಲಿ ಮೂರು ಸಾವಿರ ಉಪನ್ಯಾಸಕರು ನಿವೃತ್ತಿ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಸರ್ಕಾರ ಕಾಲೇಜುಗಳನ್ನು ಮುನ್ನೆಡೆಸುತ್ತಿತ್ತು. ಆದರೆ, ಪ್ರಸಕ್ತ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಿ 2 ತಿಂಗಳಾದರೂ ಉಪನ್ಯಾಸಕರನ್ನು ನೇಮಿಸಿಕೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಇಲ್ಲದಂತಾಗಿದೆ. ಸರ್ಕಾರದ ನಡೆ ಗಮನಿಸಿದರೆ ಕೆಲವೇ ವರ್ಷಗಳಲ್ಲಿ ಪದವಿ ಕಾಲೇಜುಗಳನ್ನು ಸಂಪೂರ್ಣ ನಿರ್ನಾಮ ಮಾಡಲು ಪಣ ತೊಟ್ಟಂತಿದೆ ಎಂದು ದೂರಿದರು.
ಹಿಂದು ಪರ ಸಂಘಟನೆಯ ಅಯ್ಯನಗೌಡ, ಹನುಮೇಶ, ಸಂಪತ್, ಶ್ರೀನಿವಾಸ, ವಿನಾಯಕ ಸಜ್ಜನ್, ಗೋಪಾಲ, ಸೃಜನ್ ಸಜ್ಜನ್, ವಿದ್ಯಾರ್ಥಿಗಳಾದ ಚೈತ್ರಾ, ಭಾವನಾ, ಜ್ಯೋತಿ, ಸುಮಿತ್ರಾ, ಅಮೃತಾ, ಮೀನಾಕ್ಷಿ, ಚನ್ನಮ್ಮ, ನಿರುಪಾದಿ, ಕಲ್ಯಾಣ ಕುಮಾರ್, ಮಹಾದೇವಿ, ಗೀತಾ, ಗುರುರಾಜ್, ಶಿವರಾಜ್, ಕುಬೇರ್, ಶ್ರೀನಿವಾಸ್, ಸಮೀರ್ ಇತರರಿದ್ದರು
ಮಳೆಯಲ್ಲೇ ಹೋರಾಟ: ಕಾಲೇಜಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಜಬೀದಿಗೆ ತಲುಪುವಷ್ಟರಲ್ಲಿಯೇ ಮಳೆ ಆರಂಭಗೊಂಡಿತು. ಮಳೆಯಲ್ಲೇ ವಾಲ್ಮೀಕಿ ವೃತ್ತದವರೆಗೆ ಆಗಮಿಸಿದ ವಿದ್ಯಾರ್ಥಿಗಳು, ಉಪ ತಹಸೀಲ್ದಾರ್ ಮನವಿ ಸ್ವೀಕರಿಸುವುದನ್ನು ನಿರಾಕರಿಸಿದರು. ತಹಸೀಲ್ದಾರರೇ ಬಂದು ಮನವಿ ಸ್ವೀಕರಿಸುವಂತೆ ಪಟ್ಟು ಹಿಡಿದು ವಾಹನ ಸಂಚಾರ ತಡೆದು ಮಹಳೆಯಲ್ಲೇ ಪ್ರತಿಭಟಿಸಿದರು. ನಂತರ ತಹಸೀಲ್ದಾರ್ ವಿಶ್ವನಾಥ ಮುರುಡಿ ಸ್ಥಳಕ್ಕಾಗಮಸಿ ಮನವಿ ಸ್ವೀಕರಿಸಿದರು.